ಅನಾವರಣ ವಸ್ತು ಪ್ರದರ್ಶನ ಉದ್ಘಾಟಿಸಿ ಪತ್ರಕರ್ತ ಕೆ.ದೀಪಕ್ ಕರೆ
ಮೈಸೂರು : ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಚಿಂತಿಸುವುದನ್ನು ಮೈಗೂಡಿಸಿಕೊಂಡಾಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೆ.ದೀಪಕ್ ಅಭಿಪ್ರಾಯಪಟ್ಟರು.
ನಗರದ ಹೂಟಗಳ್ಳಿ ಹೌಸಿಂಗ್ ಕಾಲೋನಿಯಲ್ಲಿರುವ ರೋಟರಿ ಮಿಡ್ ಟೌನ್ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ‘ ಅನಾವರಣ ‘ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಭೂಮಿ, ಪರಿಸರ, ಮನುಷ್ಯನ ಹುಟ್ಟು, ಜೀವನದಿಂದ ಆರಂಭಗೊಂಡು ಸಾವಿನವರೆಗೂ ವಿಜ್ಞಾನವೇ ಮೂಲ ಸೆಲೆ. ಆದ್ದರಿಂದ ವಿದ್ಯಾರ್ಥಿಗಳು ಮೌಢ್ಯ ಕಂದಾಚಾರ, ಮೂಡ ನಂಬಿಕೆಯ ಆಚಾರ – ವಿಚಾರಗಳನ್ನು ನಂಬುವುದನ್ನು ಬಿಟ್ಟು ವಿಜ್ಞಾನದ ಕಡೆಗೆ ನಿಮ್ಮ ಆಸಕ್ತಿ ಮತ್ತು ಚಿಂತನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಶ್ರಮವಹಿಸಿ ಓದಿ ಪರೀಕ್ಷೆ ಬರೆಯದೆ ಪಾಸಾಗಲು ದೇವರ ಮೊರೆ ಹೋದರೆ ಪ್ರಯೋಜನವಿಲ್ಲ. ಪುಸ್ತಕ ನಮಗೆ ಪಾಠ ಕಲಿಸುವಾಗ ನಾವು ನಿದ್ದೆಗೆ ಜಾರಿದರೆ, ಮುಂದೆ ಜೀವನ ನಮಗೆ ಪಾಠ ಕಲಿಸುವಾಗ ನಾವು ನಿದ್ದೆಗೆಡಬೇಕಾಗುತ್ತದೆ. ಆದ್ದರಿಂದ ಬಾಹ್ಯ ಆಕರ್ಷಣೆಗಳಿಗೆ ಮನಸ್ಸು ಕೊಡದೆ ಓದಿನ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ನಮಗೆ ಜನುಮ ಕೊಟ್ಟು, ಅನ್ನ ಕೊಟ್ಟು, ವಿದ್ಯೆ ಕೊಟ್ಟು ಉತ್ತಮ ಮನುಷ್ಯರನ್ನಾಗಿ ಮಾಡಲು ನಮ್ಮ ಜೀವನವನ್ನು ಮುಡುಪಾಗಿಡುವ ತಂದೆ- ತಾಯಿ ನಮ್ಮ ನಿಜವಾಗಿ ಹಿರೋ- ಹಿರೋಯಿನ್ ಎಂಬ ಭಾವನೆ ಮಕ್ಕಳಿಗೆ ಬರಬೇಕು. ಅಗ ಮಾತ್ರ ನಿಮ್ಮ ಗುರಿ ಮತ್ತು ಸಾಧನೆಗೆ ಸ್ಪಷ್ಟ ರೂಪ ಬರಲಿದೆ ಎಂದು ತಿಳಿಸಿದರು.
ಒಂದು ದಿನದ ವಸ್ತು ಪ್ರದರ್ಶನದಲ್ಲಿ ಮಕ್ಕಳು ವಿಜ್ಞಾನ, ಗಣಿತ, ಕನ್ನಡ, ಹಿಂದಿ, ಕ್ರೀಡೆ, ಇಂಗ್ಲಿಷ್, ಎನ್ಸಿಸಿ ವಿಷಯಗಳ ಕುರಿತು ಮಾದರಿಗಳನ್ನು ಅನಾವರಣಗೊಳಿಸಿದರು. ಪೋಷಕರು, ವಿವಿಧ ಶಾಲೆಯ ಮಕ್ಕಳು ವಸ್ತು ಪ್ರದರ್ಶನ ವೀಕ್ಷಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಪ್ರಾಂಶುಪಾಲರಾದ ಆತ್ಮಾನಂದ, ಕರಾಟೆ ಪಟು ಸಿದ್ದರಾಜು, ಪವಿತ್ರನ್, ಶಿಕ್ಷಕ ವೃಂದ ಹಾಜರಿದ್ದರು.