ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿವಾದಿತ ಪೋಸ್ಟ್ ಮಾಡಿರುವ ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಉದಯಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾರ್ಯಕರ್ತರೊಡನೆ ಉದಯಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಲಕ್ಷ್ಮಣ್ ಅವರು, ವಿವಾದಿತ ಪೋಸ್ಟ್ ಮಾಡಿದ್ದ ಸುರೇಶ್ ಎಂಬಾತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿರುವ ಅವರು, ಆರೋಪಿ ಸುರೇಶ್ ತನ್ನ ಫೇಸ್‌ಬುಕ್ ಖಾತೆಯಲ್ಲಿ ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಅರವಿಂದ ಕೇಜ್ರಿವಾಲ್ ಅವರ ಚಿತ್ರಗಳನ್ನು ಅಶ್ಲೀಲವಾಗಿ ಬಿಂಬಿಸಿ ಆಕ್ಷೇಪಾರ್ಹ ಬರವಣಿಗೆಗಳನ್ನು ಬರೆದು ಪೋಸ್ಟ್ ಮಾಡಿದ್ದಾನೆ. ಇದಲ್ಲದೇ ಮುಸ್ಲಿಂ ಧರ್ಮಗುರುಗಳ ಬಗ್ಗೆಯೂ ಅಶ್ಲೀಲ ಮತ್ತು ಆಕ್ಷೇಪವಾದ ಬರಹ ಬರೆದಿದ್ದಾನೆ.
ನಗರದಲ್ಲಿ ಮತ್ತು ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಲು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ಮಾಡುತ್ತಿರುವ ಪಿತೂರಿ ಇದು. ಆದ್ದರಿಂದ ಪೋಸ್ಟ್ ಮಾಡಿರುವವನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.





