ಮೈಸೂರು: ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯುವ ಮಹಿಳಾ ಉದ್ಯಮಿಗಳಿಂದ ತಯಾರಿಸಲಾದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊರೊನಾ ನಂತರ ಸುಮಾರು 80 ಸಾವಿರಕ್ಕೂ ಹೆಚ್ಚು ಎಂಎಸ್‌ಎಂಗಳು ಮುಚ್ಚಿ ಹೋಗಿವೆ. ರಾಜ್ಯ ಸರ್ಕಾರ ಈಗ ಮತ್ತೆ ಅವುಗಳ ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.
ಗ್ರಾಮೀಣಾಭಿವೃದ್ದಿ ಸಚಿವನಾಗಿದ್ದ ಸಂದರ್ಭದಲ್ಲಿ ಮಹಿಳಾ ಉದ್ಯಮಕ್ಕಾಗಿ ಕಡಕೊಳದ ಬಳಿ ಜಮೀನನ್ನು ನೀಡಲಾಗಿತ್ತು. ಮಹಿಳೆಯರಿಗೆ ಸೂಕ್ತ ಅವಕಾಶಗಳನ್ನು ಒದಗಿಸಿದರೆ ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ತಿಳಿಸಿದರು.
ಕಾಸಿಯಾ ಅಧ್ಯಕ್ಷರಾದ ಎಂಜಿ ರಾಜಗೋಪಾಲ್ ಮಾತನಾಡಿ, ಮಹಿಳೆಯರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ. ಈ ಬಾರಿ ಒಟ್ಟಾರೆ 85 ಮಳಿಗೆಗಳಿದ್ದು, ಮಹಿಳೆಯರಿಂದಲೇ ತಯಾರಿಸಲ್ಪಟ್ಟ ಮಕ್ಕಳ ಆಟಿಕೆಗಳು, ಆಹಾರೊತ್ಪನ್ನಗಳು, ಕರಕುಶಲ ವಸ್ತುಗಳು ಲಭ್ಯವಿದೆ ಎಂದು ಮಾಹಿತಿ ನೀಡಿದರು.
ಮಹಿಳೆಯರ ಮಳಿಗೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮೂರು ಮಳಿಗೆಗಳಿಗೆ ಪ್ರಶಸ್ತಿ ನೀಡುವುದರ ಜೊತೆಗೆ ಭಾಗವಹಿಸಿದ್ದ ಪ್ರತಿಯೊಬ್ಬ ಮಹಿಳೆಯರಿಗೂ ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ರಾಜ್ಯ ಉಪಾದ್ಯಕ್ಷರಾದ ಡಾ.ಪುಷ್ಪ ಅಮರನಾಥ್, ಕಾಸಿಯಾ ಅಧ್ಯಕ್ಷರಾದ ಬಿ.ಆರ್.ಗಣೇಶ್ ರಾವ್, ಜಂಟಿ ಕಾರ್ಯದರ್ಶಿ ಎನ್.ಸತೀಶ್, ಜೆ.ಎಸ್.ಬಾಬು ಸೇರಿದಂತೆ ಇತರರು ಹಾಜರಿದ್ದರು.