Mysore
21
overcast clouds
Light
Dark

ಹಿರಿಯ ಪತ್ರಕರ್ತ ಎಸ್.ಪ್ರಕಾಶ್ ಬಾಬು ಅವರ ಎರಡೂ ಕೃತಿಗಳ ಲೋಕಾರ್ಪಣೆ

ಮೈಸೂರು: ಹಿರಿಯ ಪತ್ರಕರ್ತ ಮತ್ತು ಲೇಖಕ ಎಸ್.ಪ್ರಕಾಶ್ ಬಾಬು ಅವರು ಬರೆದಿರುವ ʼʼಅವರು ಹೋದಮೇಲೆʼʼ ಮತ್ತು ʼʼಸಿನಿ ಸಾಧಕರ ಟರ್ನಿಂಗ್ ಪಾಯಿಂಟ್ʼʼ ಎಂಬ ಎರಡು ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.

ಇಂದು ಬೆಳಿಗ್ಗೆ ಮೈಸೂರು ನಗರದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಈ ಎರಡು ಕೃತಿಗಳನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಿಡುಗಡೆ ಮಾಡಿದರು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಿಮಾಲಯ ಫೌಂಡೇಶನ್ ಮತ್ತು ಬೆಂಗಳೂರಿನ ಸಿವಿಜಿ ಪಬ್ಲಿಕೇಷನ್ಸ್ ಜಂಟಿಯಾಗಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಮೈಸೂರು ನಗರಾಭಿವೃದ್ಧಿ ಸಂಸ್ಥೆ ಮಾಜಿ ಅಧ್ಯಕ್ಷ ಡಿ.ಮಾದೇಗೌಡ ಅವರು, ಪತ್ರಕರ್ತರಾಗಿ ಸಾಹಿತ್ಯ ರೂಢಿಸಿಕೊಂಡಿರುವ ಎಸ್.ಪ್ರಕಾಶ್ ಬಾಬು ಅವರ “ಅವರು ಹೋದಮೇಲೆ” ಮತ್ತು “ಸಿನಿ ಸಾಧಕರ ಟರ್ನಿಂಗ್ ಪಾಯಿಂಟ್” ಎಂಬ ಎರಡು ಕೃತಿಗಳು ಸಾಧನೆ ಮಾಡಿ ಗತಿಸಿದ ಮತ್ತು ಸಾಧನೆ ಮಾಡುತ್ತಿರುವ ಸಾಧಕರ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ತಿಳಿಸುತ್ತದೆ.

ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಯುವಕರಿಗೆ ಇವೆರಡೂ ಕೃತಿಗಳು ಸ್ಪೂರ್ತಿದಾಯಕವಾಗಿವೆ. ಇದೊಂದು ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಪ್ರಾಕಾರವಾಗಿಯೂ ಈ ಕೃತಿಗಳು ಗುರುತಿಸಿಕೊಳ್ಳುತ್ತವೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಹಾಗೂ ಶ್ರೀದತ್ತಪೀಠದ ಆಸ್ಥಾನ್ ವಿದ್ವಾನ್ ಪ್ರೊ.ಸಿಪಿಕೆ ಎಂದೇ ಖ್ಯಾತರಾದ ಡಾ.ಸಿ.ಪಿ.ಕೃಷ್ಣಕುಮಾರ್ ಅವರು ಮಾತನಾಡಿ, “ಅವರು ಹೋದಮೇಲೆ” ರಾಷ್ಟ್ರಕವಿ ಕುವೆಂಪು, ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ್ ಅರಸ್ ಮತ್ತು ಕನ್ನಡ ಚಿತ್ರರಂಗದ ಮೇರು ನಟರಾದ ಡಾ ರಾಜಕುಮಾರ್ ಸೇರಿದಂತೆ 35 ಗಮನಾರ್ಹ ವ್ಯಕ್ತಿಗಳು ಸಮಾಜದ ಮೇಲೆ ಶಾಶ್ವತವಾದ ಪ್ರಭಾವವನ್ನು ಹೇಗೆ ಬೀರಿದ್ದಾರೆ ಎಂಬುದನ್ನು ಎತ್ತಿ ತೋರಿಸುತ್ತದೆ.

ಹಾಗೇ “ಸಿನಿ ಸಾಧಕರ ಟರ್ನಿಂಗ್ ಪಾಯಿಂಟ್” ಪುಸ್ತಕವು ಹಿರಿಯ ನಟಿಯರಾದ ಭಾರತಿ, ಜಯಂತಿ ಅವರನ್ನಲ್ಲದೆ, ಈಗಿನ ನಟರಾದ ನಟ ದರ್ಶನ್ ತೂಗುದೀಪ ಸೇರಿದಂತೆ ಹಲವಾರು ಸಿನಿ ಕಲಾವಿದರು ತಮ್ಮ ವೃತ್ತಿ ಬದುಕಿನ ಆರಂಭದಲ್ಲಿ ಸಾಧನೆಯ ಬೆನ್ನು ಹತ್ತಿ ಗೆದ್ದ ತಿರುವಿನ ಬಗ್ಗೆ ಆಸಕ್ತಿದಾಯಕ ಒಳನೋಟಗಳನ್ನು ಹಂಚಿಕೊಳ್ಳುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವಧೂತ ದತ್ತ ಪೀಠ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಪರಮ ಹಂಸ ಪರಿವ್ರಾಜಕ ಸ್ವಾಮೀಜಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಎಸ್.ಪ್ರಕಾಶ್ ಬಾಬು ಅವರು ಬರೆದ ಎರಡೂ ಕೃತಿಗಳಲ್ಲಿ ಸಿನಿಮಾ ಕ್ಷೇತ್ರದವರ ವಿಷಯಗಳೇ ಹೆಚ್ಚಿದ್ದರೂ, ಅದರಲ್ಲಿರುವ ಸಾಹಿತ್ಯ ಸರಸ್ವತಿ ಅಕ್ಕರೆಯಿಂದ ಸಾಧಕರನ್ನು ಕರೆದು ಪ್ರೋತ್ಸಾಹಿಸುವಂತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಕೆ.ಜೆ.ಕುಮಾರ್, ಸಮಾಜಸೇವಕ ಡಾ.ಕೆ.ರಘುರಾಮ್ ವಾಜಪೇಯಿ, ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ಡಿ.ರವಿಕುಮಾರ್, ಲೇಖಕ ಎಸ್.ಪ್ರಕಾಶ್‌ಬಾಬು ಮತ್ತು ವ್ಯಂಗ್ಯಚಿತ್ರಕಾರ ಎಂ ವಿ ನಾಗೇಂದ್ರ ಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿಮಾಲಯ ಫೌಂಡೇಷನ್ ಅಧ್ಯಕ್ಷ ಎನ್.ಅನಂತ ಅವರು ಕಾರ್ಯಕ್ರಮದ ವಂದನಾರ್ಪಣೆ ಮಾಡಿದರು. ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ವಿ ಹೆಗಡೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.