ಮೈಸೂರು : ನಾಗರಹೊಳೆ ಮತ್ತು ಬಂಡೀಪುರದಲ್ಲಿ ವನ್ಯಜೀವಿ ಸಫಾರಿ ಪುನರಾರಂಭಿಸಿರುವುದನ್ನು ಖಂಡಿಸಿ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ನಗರದ ಅಶೋಕಪುರಂನಲ್ಲಿರುವ ಅರಣ್ಯಭವನಕ್ಕೆ ಮುತ್ತಿಗೆ ಹಾಕಿ, ಗೇಟ್ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಒಕ್ಕೂಟದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಅರಣ್ಯಸಚಿವ ಈಶ್ವರ್ ಖಂಡ್ರೆ ವಿಧಾನಸೌಧದಲ್ಲಿ ಹಂತ ಹಂತವಾಗಿ ಬಂಡೀಪುರ, ನಾಗರಹೊಳೆ ವ್ಯಾಪ್ತಿಯಲ್ಲಿ ಹಗಲು ವೇಳೆ ಸಫಾರಿ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಸಚಿವರ ಈ ನಿರ್ಧಾರ ರೈತರು, ಪ್ರಾಣಿಗಳು ಹಾಗೂ ಅರಣ್ಯವಿರೋಽಯಾಗಿದೆ. ಸಾರ್ವಜನಿಕರ ಪ್ರಾಣದೊಂದಿಗೆ ಚೆಲ್ಲಾಟ ಆಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಕೇವಲ ಬಂಡವಾಳಶಾಹಿಗಳು, ಶ್ರೀಮಂತರು ಕಾಡಿನೊಳಗೆ ಮೋಜು-ಮಸ್ತಿ ಮಾಡಲು ಅವಕಾಶ ಕಲ್ಪಿಸಿರುವುದು ಸರಿಯಲ್ಲ. ಈ ಹಣದಿಂದ ಸರ್ಕಾರ ನಡೆಸುವ ದರಿದ್ರ ರಾಜ್ಯಸರ್ಕಾರಕ್ಕೆ ಬಂದಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿ ಕಾರಿದರು.
ರೈತರ ಮಕ್ಕಳ ಸಮಾಧಿ ಮೇಲೆ ಗ್ಯಾರಂಟಿ ಯೋಜನೆಗೆ ಹಣ ಒದಗಿಸಲು ಸರ್ಕಾರ ಈ ರೀತಿಯ ನಿರ್ಧಾರ ತೆಗೆದುಕೊಂಡಿದೆ. ಸಚಿವರು, ಶಾಸಕರು, ಸಂಸದರು ಕಾಡಿನಲ್ಲಿ ವಾಸ ಮಾಡುತ್ತಿಲ್ಲ, ಕಾಡಂಚಿನಲ್ಲೂ ವ್ಯವಸಾಯ ಮಾಡುತ್ತಿಲ್ಲ. ಕೇವಲ ಕಾಡನ್ನು ನೋಡಿ ಮನೆ ಸೇರುತ್ತಾರೆ. ಕಾಡಂಚಿನ ಪ್ರದೇಶದಲ್ಲಿರುವ ರೈತರು, ಅವರ ಮಕ್ಕಳು ಸಫಾರಿಯಿಂದ ನೊಂದ ಪ್ರಾಣಿಗಳ ಆಕ್ರೋಶಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಫಾರಿ ಬಂದ್ ಆದ ಮೇಲೆ ಯಾವುದೇ ಮಾನವ-ಪ್ರಾಣಿ ಸಂಘರ್ಷ ವರದಿಯಾಗಿಲ್ಲ. ಸಫಾರಿಯಿಂದ ಕಾಡಿನಲ್ಲಿ ವಾಸ ಮಾಡುವ ಪ್ರಾಣಿಗಳ ವೈವಿಧ್ಯತೆಗೆ ತೊಂದರೆ ಉಂಟಾಗುತ್ತದೆ. ಸ್ಥಳೀಯ ರೈತರೊಂದಿಗೆ ಚರ್ಚಿಸದೆ ಈ ನಿರ್ಧಾರ ತೆಗೆದುಕೊಂಡಿರುವುದು ರೈತ ವಿರೋಧಿ ಧೋರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಡಿಸಿಎಫ್ ಪರಮೇಶ್ ಅವರಿಗೆ ಹಕ್ಕೋತ್ತಾಯ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ರಾಜ್ಯಖಜಾಂಚಿ ಕೆರೆಹುಂಡಿ ರಾಜಣ್ಣ, ಸಂಚಾಲಕ ಹನುಮಯ್ಯ, ಜಿಲ್ಲಾ ಕಾರ್ಯದರ್ಶಿ ಮಲಿಯೂರು ಮಹೇಂದ್ರ, ಪ್ರಕಾಶ್ ಗಾಂಧಿ, ಎಚ್.ಗುಂಡ್ಲ ಚಿದಂಬರ್, ಮುದ್ದಳ್ಳಿ ಮಧು, ಅಂಡುವಿನಹಳ್ಳಿ ಜಗದೀಶ್, ಮಹೇಶ್, ದೇವಣ್ಣ, ಚೇತನ್, ನವೀನ, ಬಸವಣ್ಣ, ಮಂಜು, ಮುಳ್ಳೂರು ಕುಮಾರ್ ನಾಯಕ, ಜಗದೀಶ್, ಮಹದೇವಸ್ವಾಮಿ, ಗಣೇಶ, ಧರ್ಮೇಂದ್ರ, ಮಂಜುನಾಥ ಸೇರಿದಂತೆ ಹಲವರು ಭಾಗವಹಿಸಿದ್ದರು.





