ಮೈಸೂರು: ಮಹಾರಾಜರು ಗ್ರಾಮಸ್ಥರಿಗೆ ಜಮೀನು ಗಿಫ್ಟ್ ಕೊಟ್ಟಿದ್ದಾರೆ. ಖಂಡಿತವಾಗಿಯೂ ಗ್ರಾಮಸ್ಥರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲ್ಲ ಎಂದು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ.
ಚಾಮರಾಜನಗರದಲ್ಲಿ ಭೂಮಿ ವಿಚಾರ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು, ಜಿಲ್ಲಾಧಿಕಾರಿಗೆ ಕಳೆದ 2014ರಲ್ಲೇ ಎಲ್ಲಾ ದಾಖಲೆ ಕೊಟ್ಟಿದ್ದೇವೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಮಾಹಿತಿ ಇಲ್ಲದೆ ಇರಬಹುದು. 1951ರಲ್ಲಿ ಸರ್ಕಾರದ ಕಾರ್ಯದರ್ಶಿ ಆಗಿದ್ದ ಶ್ರೀನಿವಾಸನ್ ಅವರ ಸಹಿ ಇರುವ ಪತ್ರದಲ್ಲಿ ನಮ್ಮ ಆಸ್ತಿ ಪಟ್ಟಿಯಲ್ಲಿ 4,500 ಎಕರೆಯೂ ಇದೆ ಎಂದರು.
ಇನ್ನು ಅರಮನೆ ಹೆಸರಿಗೆ ಜಮೀನು ಬಂದರು ಗ್ರಾಮಸ್ಥರು ಆತಂಕ ಪಡುವ ಅವಶ್ಯಕತೆ ಇಲ್ಲ. ಅರಮನೆ ಹೆಸರಿಗೆ ಬಂದರು ಗ್ರಾಮಸ್ಥರು ಹಾಗೂ ನಾವು ಕುಳಿತು ಅದನ್ನು ಅವರಿಗೆ ಬಿಟ್ಟು ಕೊಡುವ ವ್ಯವಸ್ಥೆ ಮಾಡುತ್ತೇವೆ. ಆ ಗ್ರಾಮಕ್ಕೆ ಮಹಾರಾಜರು ಜಮೀನು ಗಿಫ್ಟ್ ಕೊಟ್ಟಿದ್ದಾರೆ. ಖಂಡಿತವಾಗಿಯೂ ಅವರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲ್ಲ. ಗ್ರಾಮಸ್ಥರು ತಮ್ಮ ಬಳಿ ಇರುವ ಗಿಫ್ಟ್ ದಾಖಲೆಯನ್ನು ಅರಮನೆ ಕಚೇರಿಗೆ ತಲುಪಿಸಲಿ. ಗ್ರಾಮಸ್ಥರು ಯಾವುದೇ ಸಂದರ್ಭದಲ್ಲಾದರೂ ಅರಮನೆ ಕಚೇರಿಗೆ ಗಿಫ್ಟ್ ಕೊಟ್ಟಿರುವ ದಾಖಲೆ ಇದ್ದರೆ ಕೊಡಿ. ಒಂದು ವೇಳೆ ಗ್ರಾಮಸ್ಥರ ಬಳಿ ಗಿಫ್ಟ್ ಕೊಟ್ಟ ದಾಖಲೆ ಇಲ್ಲದಿದ್ದರೂ ಅವರ್ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ ಭರವಸೆ ನೀಡಿದರು





