ಮೈಸೂರು: ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾದ ಬಳಿಕ ಖಾಲಿಯಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಸೇರಲಿದೆ ಎನ್ನಲಾಗಿದೆ.
ಈ ಬಗ್ಗೆ ಹುಣಸೂರು ಜೆಡಿಎಸ್ ಶಾಸಕ ಜಿ.ಡಿ.ಹರೀಶ್ ಗೌಡ ಅಚ್ಚರಿಯ ಹೇಳಿಕೆ ನೀಡಿದ್ದು, ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷರಾಗುವ ಎಲ್ಲಾ ಮುನ್ಸೂಚನೆಗಳು ಕಾಣುತ್ತಿವೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಶಾಸಕ ಹರೀಶ್ ಗೌಡ ಅವರು, ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾದ ಕಾರಣ ಅವರು ದೇಶದ ಎಲ್ಲಾ ರಾಜ್ಯಗಳಿಗೂ ಪ್ರವಾಸ ಕೈಗೊಳ್ಳಬೇಕು. ವಾರದಲ್ಲಿ ನಾಲ್ಕು ದಿನ ದೆಹಲಿಯಲ್ಲಿದ್ದು, ಉಳಿದ ದಿನ ಎಲ್ಲಾ ರಾಜ್ಯಗಳಿಗೂ ತೆರಳಬೇಕು. ಹೀಗಾಗಿ ವಾರದಲ್ಲಿ ಒಂದು ದಿನ ಮಾತ್ರ ಕರ್ನಾಟಕಕ್ಕೆ ಬರುತ್ತೇನೆ ಎಂದು ಸ್ವತಃ ಅವರೇ ಹೇಳಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಪಕ್ಷದ ಜವಾಬ್ದಾರಿ ಯಾರಿಗೆ ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಬಗ್ಗೆ ಅನೇಕರು ನಮ್ಮ ಬಳಿ ಪ್ರಶ್ನೆ ಮಾಡುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರೇ ಪಕ್ಷವನ್ನು ರಾಜ್ಯದಲ್ಲಿ ಕಟ್ಟುತ್ತಾರೆ. ಈ ಬಗ್ಗೆ ಕುಮಾರಸ್ವಾಮಿ ಅವರೇ ನಮ್ಮ ಬಳಿ ಹೇಳಿದ್ದಾರೆ ಎಂದರು.
ಇನ್ನು ನಾನು ಯಾವುದೇ ಹುದ್ದೆ ಪಡೆಯದೇ ರಾಜ್ಯಾದ್ಯಂತ ಓಡಾಡಿ ಪಕ್ಷ ಕಟ್ಟುತ್ತೇನೆ. ಸಿನಿಮಾದಲ್ಲಿ ನಟಿಸಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಈ ಬೆನ್ನಲ್ಲೇ ಶಾಸಕ ಹರೀಶ್ ಗೌಡ ಕೂಡ ಈ ರೀತಿ ಹೇಳಿಕೆ ನೀಡಿರುವುದು ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಜೆಡಿಎಸ್ ಪಕ್ಷ ಮತ್ತೆ ಕರ್ನಾಟಕದಲ್ಲಿ ಪಾರುಪತ್ಯ ಸಾಧಿಸಲು ಎಲ್ಲಾ ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ.





