ಮೈಸೂರು: ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಕ್ರಮ ಮದ್ಯ ಹಾಗೂ ಮಾದಕ ವಸ್ತುಗಳ ಮಾರಾಟ ತಡೆಯಲು ಅಬಕಾರಿ ಇಲಾಖೆ ಸಂಪೂರ್ಣ ಅಲರ್ಟ್ ಆಗಿದೆ. ಬೆಳ್ಳಂಬೆಳಗ್ಗೆಯೇ ಅಬಕಾರಿ ಪೊಲೀಸರು ಅಕ್ರಮ ಮದ್ಯ, ಡ್ರಗ್ಸ್ ಮಾರಾಟ ಜಾಲದ ಮೇಲೆ ತೀವ್ರ ಶೋಧಕಾರ್ಯ ಆರಂಭಿಸಿದ್ದಾರೆ.
ಇತ್ತೀಚೆಗೆ ಮೈಸೂರು ಹಾಗೂ ಬೆಂಗಳೂರು ನಗರಗಳಲ್ಲಿ ಡ್ರಗ್ಸ್ ಫ್ಯಾಕ್ಟರಿಗಳು ತಲೆ ಎತ್ತಿರುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಹೆಚ್ಚುವರಿ ಎಚ್ಚರಿಕೆ ವಹಿಸಿದೆ. ಎಣ್ಣೆ ಹೊಡೆದು ತೂರಾಡುವವರ ಚಲನವಲನಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದು, ಮದ್ಯದ ಅಂಗಡಿಗಳ ಮೇಲೂ ದಾಳಿ ನಡೆಸಲಾಗಿದೆ. ಜೊತೆಗೆ ಬಾರ್‌ಗಳು ಹಾಗೂ ರೆಸ್ಟೋರೆಂಟ್‌ಗಳಲ್ಲಿ ವಿವಿಧ ಕಡೆಗಳಲ್ಲಿ ತಲಾಶ್ ಕಾರ್ಯ ಕೈಗೊಳ್ಳಲಾಗಿದೆ.
ಅಬಕಾರಿ ಉಪಅಧೀಕ್ಷಕ ಹೆಚ್.ಕೆ. ರಮೇಶ್ ಅವರ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಮೈಸೂರಿನ ಹಲವು ಬಡಾವಣೆಗಳಲ್ಲಿ ತಪಾಸಣೆ ನಡೆಸಲಾಗಿದೆ. ಮಾದಕ ವ್ಯಸನಿಗಳ ಮೇಲೂ ಹದ್ದಿನ ಕಣ್ಣಿಟ್ಟಿರುವ ಅಬಕಾರಿ ಪೊಲೀಸರು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.
ಆಲಿಮ್ ನಗರ, ಸಾಯಿ ಬಾಬಾ ಕಾಲೋನಿ, ಅಬ್ದುಲ್ ಕಲಾಂ ನಗರ, ವಂದೇ ಮಾತರಂ ಕಾಲೋನಿ–1 ಮತ್ತು 2, ಎಲ್ಲಮ್ಮ ಕಾಲೋನಿ ಹಾಗೂ ಬೆಲವತ್ತ ಗ್ರಾಮಗಳಲ್ಲಿ ಸಾಮೂಹಿಕ ಅಬಕಾರಿ ದಾಳಿ ನಡೆಸಲಾಗಿದೆ.
ಅಕ್ರಮ ಮದ್ಯ ಅಥವಾ ಮಾದಕ ವಸ್ತುಗಳು ಪತ್ತೆಯಾದರೆ ಸಂಬಂಧಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.





