ಮೈಸೂರು: ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಜಗಮಗಿಸುವ ದೀಪಾಲಂಕಾರ, ಫಲಪುಷ್ಪ ಪ್ರದರ್ಶನದ ಸೊಬಗಿನ ಮಧ್ಯೆ ಪಾರಂಪರಿಕ ಪೊಲೀಸ್ ಬ್ಯಾಂಡ್‌ನ ಸದ್ದಿನೊಂದಿಗೆ ಮೈಸೂರಿಗರು ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡರು.
ಅರಮನೆ ಮಂಡಳಿ ವತಿಯಿಂದ ಬಣ್ಣಗಳ ಚಿತ್ತಾರಗಳಿಂದ ಕೂಡಿದ ಶಬ್ಧರಹಿತ ಹಸಿರು ಪಟಾಕಿ ಸಿಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಆ ಮೂಲಕ ಪ್ರವಾಸಿಗರು, ಮೈಸೂರಿಗರು ಅರಮನೆ ಮುಂಭಾಗದಲ್ಲಿ ಪಟಾಕಿ ಸಿಡಿತದ ಸಡಗರದ ನಡುವೆ ಹೊಸ ವರ್ಷವನ್ನು ಬರಮಾಡಿಕೊಂಡರು.
ಇನ್ನು ರಸ್ತೆ ರಸ್ತೆಗಳಲ್ಲಿ ಡ್ಯಾನ್ಸ್ ಮಾಡುತ್ತಾ, ಶಿಳ್ಳೆ, ಚಪ್ಪಾಳೆ ಹಾಕುತ್ತಾ ಯುವಕರು ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡರು.
ರಸ್ತೆ ರಸ್ತೆಗಳಲ್ಲೇ ಕೇಕ್ ಕತ್ತರಿಸಿ ಹೊಸ ವರ್ಷವನ್ನು ಬರಮಾಡಿಕೊಂಡ ಮೈಸೂರಿಗರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.





