ಮೈಸೂರು: ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ನೀಡುವ ದಕ್ಷಿಣ ಭಾರತದ ರಾಜ್ಯಗಳಿಗೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಚಿಪ್ಪು ನೀಡಲಾಗಿದೆ ಎಂದು ಆರೋಪಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಹಳೆ ಜಿಲ್ಲಾಧಿಕಾರಿ ಎದುರು ಪ್ರತಿಭಟನೆ ನಡೆಸಿ ಕೈನಲ್ಲಿ ತೆಂಗಿನಕಾಯಿ ಚಿಪ್ಪು ತೋರಿಸಿ ಅಣುಕು ಪ್ರದರ್ಶನ ನೀಡಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲ ಸೀತಾರಾಮ್ ಎಂಟು ಬಾರಿ ಬಜೆಟ್ ಮಂಡಿಸಿದರು ಸಹ ರಾಜ್ಯದ ಬಾಯಾರಿಕೆ ತೀರಿಸುವಂತಹ ಮಹದಾಯಿ ಯೋಜನೆ, ಮೇಕೆದಾಟು ಕುಡಿಯುವ ನೀರಿನ ಯೋಜನೆ, ಬೃಹತ್ ಕೈಗಾರಿಕೆಗಳು, ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸದೆ ಇರುವುದು ಕನ್ನಡ ನಾಡಿನ ವಿರೋಧಿ ನೀತಿಯನ್ನು ಎತ್ತು ತೋರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಿಂದ ಆಯ್ಕೆಯಾಗಿರುವ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಕುಡಿಯುವ ನೀರಿನ ಯೋಜನೆಯನ್ನು ಈ ಬಾರಿ ಬಜೆಟ್‌ನಲ್ಲಿ ತಂದೆ ತರುತ್ತೇನೆ ಎಂದು ನೀಡಿದ ಭರವಸೆ ಹುಸಿಯಾಗಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣ ಉಪ್ಪಿನ ಕಾರ್ಖಾನೆ ಪುನಶ್ಚೇತನ ಗೊಳಿಸಲು ೧೧ ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. ರಾಜ್ಯದ ಭದ್ರಾವತಿ ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆಗೆ ಕವಡೆ ಕಾಸು ನೀಡಲಿಲ್ಲ. ಇದರ ಬಗ್ಗೆ ನಮ್ಮ ಸಚಿವರು ಮಾತಾಡಲಿಲ್ಲ. ಮಂಡ್ಯದಲ್ಲಿ ಗೆದ್ದು ಮಂಡ್ಯ ಜನತೆಗೆ ಯಾವ ಸೌಲಭ್ಯನೂ ಸಹ ತಂದು ಕೊಡಲಿಲ್ಲ ಎಂದು ಕಿಡಿಕಾರಿದರು.
ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಬರಿಸುತ್ತಿರುವ ರಾಜ್ಯ ಕರ್ನಾಟಕ. ಆದರೆ ಬಿಡುಗಡೆ ಆಗುತ್ತಿರುವ ಹಣ ಅತ್ಯಲ್ಪ. ಈ ಅನ್ಯಾಯದ ಬಗ್ಗೆ ಇನ್ನಾದರೂ ಎಚ್ಚೆತ್ತು ಪಕ್ಷಾತೀತವಾಗಿ ಸಂಸದರು ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
ವೇದಿಕೆಯ ಅಧ್ಯಕ್ಷ ಎಸ್.ಬಾಲಕೃಷ್ಣ, ಪದಾಧಿಕಾರಿಗಳಾದ ನಾಲ ಬೀದಿರವಿ, ಗುರುಬಸಪ್ಪ, ಗೋಪಿ, ಬೋಗಾದಿ ಸಿದ್ದೇಗೌಡ, ಪ್ಯಾಲೇಸ್ ಬಾಬು, ಸಿದ್ದಪ್ಪ ಎಲ್‌ಐಸಿ, ಗೋವಿಂದ್ ರಾಜ್, ಸ್ವಾಮಿ, ಬೀಡಾ ಬಾಬು, ಮನೋಹರ್, ಹರೀಶ್, ವಾದಪ್ಪ, ಅರವಿಂದ, ಮದನ್, ಸ್ವಾಮಿ ಗೈಡ್, ಚಿನ್ನಪ್ಪ, ಸುನಿಲ್, ಶಿವು ಮುಂತಾದವರು ಇನ್ನಿತರರು ಹಾಜರಿದ್ದರು.