Mysore
20
clear sky

Social Media

ಬುಧವಾರ, 28 ಜನವರಿ 2026
Light
Dark

ಮೈಸೂರಿನ ಕುವೆಂಪು ಮನೆ ಇನ್ಮುಂದೆ ಸ್ಮಾರಕ : ಸರ್ಕಾರದ ಘೋಷಣೆ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಷ್ಟ್ರಕವಿ ಕುವೆಂಪು ಅವರು ವಾಸವಿದ್ದ ನಿವಾಸವನ್ನು ಸ್ಮಾರಕ ಮತ್ತು ಮ್ಯೂಸಿಯಂ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಮೈಸೂರಿನ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರೀಶ್ ಗೌಡ ಅವರು ಗಮನ ಸೆಳೆಯುವ ಸೂಚನೆಯಲ್ಲಿ ವಿಷಯ ಪ್ರಸ್ತಾಪಿಸಿದರು.

ಸರ್ಕಾರದ ಪರವಾಗಿ ಉತ್ತರಿಸಿದ ನಗರ ಅಭಿವೃದ್ದಿ ಸಚಿವ ಭೈರತಿ ಸುರೇಶ್, ಮೈಸೂರಿನಲ್ಲಿ ರಾಷ್ಟ್ರಕವಿ ಕುವೆಂಪು ಅವರು ಹಲವಾರು ವರ್ಷಗಳ ಕಾಲ ವಾಸ ಮಾಡಿದ್ದರು. ಇಲ್ಲಿಯೇ ಅನೇಕ ಕೃತಿಗಳನ್ನು ಸಹ ರಚಿಸಿದ್ದರು. ಅವರು ಇದ್ದ ನಿವಾಸವನ್ನು ಸ್ಮಾರಕ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಸ್ಮಾರಕ ನಿರ್ಮಾಣ ಹಾಗೂ ಮ್ಯೂಸಿಯಂ ಮಾಡಲು ಅಗತ್ಯವಿರುವ ಆರ್ಥಿಕ ನೆರವನ್ನು ಸರ್ಕಾರ ನೀಡಲಿದೆ ಎಂದರು.

ಕುವೆಂಪು ಅವರು ವಾಸ ಮಾಡಿದ್ದ ನಿವಾಸವನ್ನು ಯಾವ ರೀತಿ ಪುನರ್ನವೀಕರಣ ಮಾಡಬೇಕು ಎಂಬುದರ ಕುರಿತು ಸದ್ಯದಲ್ಲೇ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು. ಮುಂದಿನ ಪೀಳಿಗೆಗೆ ಅವರ ವಿಚಾರಧಾರೆಗಳು ತಿಳಿಯಬೇಕಾದ ಅಗತ್ಯವಿರುವುದರಿಂದ ಸರ್ಕಾರ ಎಲ್ಲಾ ನೆರವು ನೀಡಲು ಬದ್ಧವಿದೆ ಎಂದು ಆಶ್ವಾಸನೆ ನೀಡಿದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಶಾಸಕ ಹರೀಶ್ ಗೌಡ ಅವರು, ರಾಷ್ಟ್ರಕವಿ ಕುವೆಂಪು ಅವರು ಅನೇಕ ವರ್ಷಗಳ ಕಾಲ ಮೈಸೂರಿನಲ್ಲಿ ವಾಸ ಮಾಡಿದ್ದರು‌ ಅವರ ವಿದ್ಯಾಭ್ಯಾಸವು ಇಲ್ಲಿಯೇ ನಡೆದಿತ್ತು. ಅನೇಕ ಕಾವ್ಯಗಳು, ಕಾದಂಬರಿಗಳನ್ನು ಇಲ್ಲಿಯೇ ರಚಿಸಿ, ತಮ್ಮ ಜೀವನದ ಕೊನೆಯ ದಿನಗಳನ್ನು ಇಲ್ಲಿಯೇ ಕಳೆದಿದ್ದರು. ಹೀಗಾಗಿ ಅವರ ಮನೆಯನ್ನು ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಿಸಲು ಸರ್ಕಾರ ತ್ವರಿತ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.

ಇಂದು ಮೈಸೂರಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರವಾಸಿಗರು ಬಂದಾಗ ಅನೇಕ ಸಾಹಿತ್ಯ ಆಸಕ್ತರು ಈ ಮನೆಗೆ ತಪ್ಪದೇ ಬಂದು ಭೇಟಿ ನೀಡುತ್ತಾರೆ . ನಿವಾಸವು ದಿನ ಕಳೆದಂತೆ ಹಾಳಾಗುತ್ತ ಹೋಗುತ್ತದೆ‌. ಸರ್ಕಾರ ಕೂಡಲೇ ವಿಶೇಷ ಕಾಳಜಿ ವಹಿಸಿ ಮ್ಯೂಸಿಯ ಮತ್ತು ಸ್ಮಾರಕ ನಿರ್ಮಾಣ ಮಾಡಲು ಮುಂದಾದರೆ ಮುಂದಿನ ಯುವ ಜನಾಂಗಕ್ಕೆ ಕುವೆಂಪು ಅವರ ಸಾಹಿತ್ಯ ಚಿಂತನೆ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರದ ಪ್ರತಿನಿಧಿಗಳು ಕುವೆಂಪು ನಿವಾಸಕ್ಕೆ ಭೇಟಿ ನೀಡಿ, ಅವರ ಪುತ್ರಿ ತಾರುಣಿಯವರ ಜೊತೆ ಮಾತನಾಡಿದ್ದಾರೆ. ಸ್ಮಾರಕ ಮತ್ತು ಮ್ಯೂಸಿಯಂ ಮಾಡಲು ಅವರು ತಾತ್ವಿಕ ಒಪ್ಪಿಗೆ ಕೊಟ್ಟು, ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಈಡೇರಿಸಲಿ ಎಂದು ಹರೀಶ್ ಗೌಡ ಒತ್ತಾಯಿಸಿದರು.

Tags:
error: Content is protected !!