ಮೈಸೂರು: ಮುಡಾದಲ್ಲಿ ನಡೆದಿರುವ ಬಹುಕೋಟಿ ಹಗರಣ ಸಂಬಂಧ ಮಾಜಿ ಸಚಿವ ಸಾ.ರಾ.ಮಹೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಮುಡಾ ಹಗರಣ ಸಂಬಂಧ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಸಾ.ರಾ.ಮಹೇಶ್ ಅವರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೂಡ ಮುಡಾದಲ್ಲಿ ನಿವೇಶನ ಪಡೆದಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆರೋಪ ಮಾಡಿದ್ದಾರೆ. ಈ ಆರೋಪಗಳೆಲ್ಲಾ ಬರೀ ಸುಳ್ಳು. ಮುಡಾದಲ್ಲಿ ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಯಾವ ನಿವೇಶನವನ್ನೂ ಪಡೆದಿಲ್ಲ. ಅವರು ಸಿಎಂ ಆಗಿದ್ದಾಗಲೂ ಅಧಿಕಾರ, ಪ್ರಭಾವ ಬಳಸಿಕೊಂಡು ನಿವೇಶನ ಪಡೆದಿಲ್ಲ. ನಿವೇಶನ ಪಡೆದು ಜನರಿಗೆ ವಂಚನೆ ಮಾಡಿರುವುದು ಕಾಂಗ್ರೆಸ್ ನಾಯಕರು. ಕಾಂಗ್ರೆಸ್ ನಾಯಕರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಆರೋಪಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
ಇನ್ನೂ ಮುಂದುವರಿದು ಮಾತನಾಡಿದ ಸಾ.ರಾ.ಮಹೇಶ್ ಅವರು, ಈಗ ಮುಡಾದಲ್ಲಿ ಯಾವುದೇ ಕೆಲಸ ಕಾರ್ಯ ನಡೆಯುತ್ತಿಲ್ಲ. ಇದರಿಂದ ದೂರದ ಊರುಗಳಿಂದ ಮುಡಾಗೆ ಬರುವ ಜನರು ತೊಂದರೆ ಅನುಭವಿಸುವಂತಾಗಿದೆ. ಯಾರೋ ಮಾಡಿದ ತಪ್ಪಿಗೆ ಮತ್ಯಾರೋ ತೊಂದರೆ ಪಡುವಂತಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮುಡಾ ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ತಕ್ಕ ಶಿಕ್ಷೆಯಾಗಲೇಬೇಕು. ತಪ್ಪಿತಸ್ಥರನ್ನು ಸುಮ್ಮನೆ ಬಿಡಬಾರದು ಎಂದು ಆಗ್ರಹಿಸಿದರು.