ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಾನು ಕಾನೂನು ಬದ್ಧವಾಗಿಯೇ ನಿವೇಶನ ಪಡೆದಿದ್ದೇನೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮುಡಾ ಹಾಗೂ ವಾಲ್ಮೀಕಿ ಹಗರಣದಿಂದ ತತ್ತರಿಸಿ ಹೋಗಿದೆ. ಈ ಹಗರಣಗಳು ಬೆಳಕಿಗೆ ಬಂದಾಗಿನಿಂದ ಸಿಎಂ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ತಮ್ಮ ಹೆಂಡತಿ ಹೆಸರಿನಲ್ಲಿ ಸೈಟು ಪಡೆದಿರುವುದು ನಾಚಿಕೆಗೇಡು. ನಗರಾಭಿವೃದ್ಧಿ ಸಚಿವನನ್ನು ಕೂರಿಸಿಕೊಂಡು ಸಿದ್ದರಾಮಯ್ಯ ಸುದ್ದಿಗೋಷ್ಠಿ ಮಾಡಿದ್ದರು. ಆ ಸಚಿವ ಕಂತ್ರಿ ರೀತಿ ವರ್ತಿಸುತ್ತಿದ್ದಾನೆ. ಸಿದ್ದರಾಮಯ್ಯ ಶ್ವೇತವಸ್ತ್ರ ಧರಿಸುತ್ತಿದ್ದಾರೆ. ಆ ಶ್ವೇತ ವಸ್ತ್ರದ ಮೇಲೆ ಕಪ್ಪು ಚುಕ್ಕೆ ಬಿದ್ದಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಈಗ ಎಚ್ಚೆತ್ತುಕೊಳ್ಳದಿದ್ದರೆ ಅವರ ಜೊತೆಯಲ್ಲಿರುವವರೇ ಕಪ್ಪು ಮಸಿ ಬಳಿದು ಹೋಗುತ್ತಾರೆ. ನಿಮ್ಮ ತಪ್ಪಿನಿಂದ ಏನೂ ಅರಿಯದ ನಿಮ್ಮ ಪತ್ನಿ ಪಾರ್ವತಿಯವರ ಹೆಸರಿಗೆ ಕಳಂಕ ಬರುವಂತಾಗಿದೆ. ರಾಜ್ಯದಲ್ಲಿ ಹಿಂದೆಂದೂ ಇಷ್ಟೊಂದು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರಲಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮುಡಾ ಹಗರಣದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಮುಡಾ ಆಯುಕ್ತರ ವರ್ಗಾವಣೆ ಬಳಿಕವೂ ಅಕ್ರಮ ಮುಂದುವರಿದಿದೆ ಎಂದು ಗಂಭೀರ ಆರೋಪ ಮಾಡಿದ ಅವರು, ಮುಡಾ ಹಗರಣದ ವಿರುದ್ಧ ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ನಾನು ಕೂಡ ಭಾಗಿಯಾಗುತ್ತೇನೆ ಎಂದರು.