Mysore
23
overcast clouds
Light
Dark

ನನ್ನಂಥ ರಾಜಕಾರಣಿ ಈ ದೇಶದಲ್ಲೇ ಯಾರು ಇಲ್ಲ ಎಂದ ಶಾಸಕ ಜಿ.ಟಿ.ದೇವೇಗೌಡ

ಮೈಸೂರು: ಮೈಸೂರು ಮುಡಾದಲ್ಲಿ ನಡೆಸಿರುವ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರು, ಕಾಂಗ್ರೆಸ್‌ ಹಾಗೂ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರು, ಕಾಂಗ್ರೆಸ್‌ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ನಾನು ಸಾಲ ಮಾಡಿಕೊಂಡು ರಾಜಕಾರಣ ಮಾಡಿದ್ದೇನೆ. ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಜವಾಬ್ದಾರಿಯಿಂದ ಇಲಾಖೆ ನಡೆಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ತಮ್ಮ ವಿರುದ್ಧ ಬಂದ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಇನ್ನು ಮುಂದುವರಿದು ಮಾತನಾಡಿದ ಅವರು, ನನ್ನಂಥಹ ರಾಜಕಾರಣಿ ಈ ದೇಶದಲ್ಲೇ ಯಾರು ಇಲ್ಲ. ನಾನು ಇದುವರೆಗೂ ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಮುಂದೆ ಮಾಡೋದು ಇಲ್ಲ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಅವರು ನನಗೆ 1 ಎಕರೆ ಜಾಗ ಕೊಟ್ಟಿದ್ದೇವೆ ಅಂತಾ ಸಿಎಂ ಪಕ್ಕದಲ್ಲೇ ಕೂತು ಹೇಳಿದ್ದಾರೆ. ನನ್ನ ರಾಜಕೀಯ ಜೀವನ ನಿಮಗೆ ಗೊತ್ತಿಲ್ಲ. ನಾನು ಪ್ರಗತಿಪರ ರೈತನಾಗಿ ದುಡಿದು ಜಮೀನು ಖರೀದಿ ಮಾಡಿದ್ದೇನೆ ಎಂದು ತಮ್ಮ ವಿರುದ್ಧ ಬಂದಿರುವ ಆರೋಪವನ್ನು ತಳ್ಳಿ ಹಾಕಿದರು.

ರಾಜ್ಯದ 224 ಕ್ಷೇತ್ರಗಳ ಶಾಸಕರ ಬಗ್ಗೆಯೂ ತನಿಖೆ ಮಾಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಕೆಲಸ ಮಾಡಲಿ. ಒಂದು ವಾರದೊಳಗೆ ನಗರಾಭಿವೃದ್ಧಿ ಈ ಬಗ್ಗೆ ಸಚಿವರು ಉತ್ತರ ಕೊಡಬೇಕು. ಇಲ್ಲದಿದ್ದರೆ ನಾನೇ ಅವರಿಗೆ ನೋಟಿಸ್‌ ಜಾರಿ ಮಾಡುತ್ತೇನೆ. ನನ್ನ ವಿರುದ್ಧ ಮಾಡಿರುವ ಆರೋಪ ಸಾಬೀತು ಮಾಡದಿದ್ದರೆ ಸಚಿವರ ವಿರುದ್ಧ ಕಾನೂನು ಸಮರ ನಡೆಸುತ್ತೇನೆ. ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಕಿಡಿಕಾರಿದರು.