ಮೈಸೂರು: ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಭಾರೀ ಸಂಕಷ್ಟ ಎದುರಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೈಸೂರು ಮುಡಾದಲ್ಲಿ ಭಾರೀ ಹಗರಣ ನಡೆದಿದೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಇ.ಡಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ 20ಕ್ಕೂ ಹೆಚ್ಚು ಅಧಿಕಾರಿಗಳು ಮುಡಾ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.
ಪರಿಶೀಲನೆ ವೇಳೆ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯರಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ಇ.ಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ವೈಟ್ನರ್ ಹಾಕಿದ್ದ ಮೂಲ ದಾಖಲೆ ಹಾಗೂ ವೈಟ್ನರ್ ಹಾಕದ ಮೂಲ ದಾಖಲೆಯನ್ನು ಸಹ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಮೂಲಕ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಎದುರಾಗಿದ್ದು, ಅವರಿಗೂ ಕೂಡ ಇ.ಡಿ ನೋಟಿಸ್ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇನ್ನು ಇ.ಡಿ ಅಧಿಕಾರಿಗಳು ಮುಡಾ ಕಚೇರಿಗೆ ಆಗಮಿಸಿದ್ದು, ಕಚೇರಿಯಲ್ಲಿ ಎಲ್ಲಾ ಮೂಲ ಶಿಫಾರಸ್ಸು ಪತ್ರ ವಶಕ್ಕೆ ಪಡೆದಿದೆ. ಶಿಫಾರಸ್ಸು ಪತ್ರಗಳ ಜಾಡು ಹಿಡಿದು ತನಿಖೆ ಆರಂಭಿಸಿದ್ದು, ಮುಡಾ ಸದಸ್ಯರ ಜಾತಕ ಇ.ಡಿ ಅಧಿಕಾರಿಗಳ ಕೈಯಲ್ಲಡಗಿದೆ ಎನ್ನಲಾಗುತ್ತಿದೆ.
ಇಂದು ಕೂಡ ಮುಡಾ ಕಚೇರಿಗೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಇಂದು ಸಂಜೆಯವರೆಗೂ ಮುಡಾ ಕಚೇರಿಯಲ್ಲಿ ನಡೆದ ಪ್ರತಿ ಸಭೆಯ ವರದಿಗಳನ್ನು ಪರಿಶೀಲನೆ ನಡೆಸಲಿದ್ದಾರೆ. ಇದಲ್ಲದೇ ಎಲ್ಲಾ ಸೈಟ್‌ಗಳ ದಾಖಲೆಗಳನ್ನು ಸಹ ಪರಿಶೀಲನೆ ನಡೆಸುವ ಸಾಧ್ಯತೆಯಿದೆ.
ಇನ್ನು ಇ.ಡಿ ಅಧಿಕಾರಿಗಳು ಎಲ್ಲಾ ಮೂಲ ಶಿಫಾರಸು ಪತ್ರಗಳನ್ನು ವಶಕ್ಕೆ ಪಡೆದಿದ್ದು, ಈ ಮೊದಲಿನಿಂದ ಮುಡಾದಲ್ಲಿ ಸದಸ್ಯರಾಗಿದ್ದ ನಾಯಕರಿಗೂ ನಡುಕ ಶುರುವಾಗಿದೆ ಎನ್ನಲಾಗಿದೆ.