ಮೈಸೂರು: ಸಿಎಂ ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನಸ್ವಾಮಿ ರಾತ್ರೋರಾತ್ರಿ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎ3 ಆರೋಪಿಯಾಗಿರುವ ಮಲ್ಲಿಕಾರ್ಜುನಸ್ವಾಮಿ ರಾತ್ರೋರಾತ್ರಿ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಯಾವುದೇ ಅಧಿಕಾರಿಗಳು ರಾತ್ರಿ ಸಮಯದಲ್ಲಿ ದಾಖಲೆಗಳನ್ನು ತಂದು ಕೊಡಿ ಎಂದು ಕೇಳುವುದಿಲ್ಲ. ಅವರು ರಾತ್ರಿ ವೇಳೆಯಲ್ಲಿಯೇ ಯಾಕೆ ದಿಢೀರ್‌ನೇ ಕಚೇರಿಗೆ ಭೇಟಿ ನೀಡಿದ್ದಾರೆ ಎಂದು ಪ್ರಶ್ನಿಸಿದರು.
ಲೋಕಾಯುಕ್ತ ಅಧಿಕಾರಿಗಳು ಮುಡಾ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ಪ್ರಾಮಾಣಿಕವಾದ ತನಿಖೆ ನಡೆಸಲು ಸಾಧ್ಯವಿಲ್ಲ. ಏಕೆಂದರೆ ಎ1 ಆರೋಪಿ ಸಿದ್ದರಾಮಯ್ಯ ಅವರೇ ರಾಜ್ಯ ಸರ್ಕಾರ ನಡೆಸುತ್ತಿದ್ದಾರೆ. ಈ ಮಧ್ಯೆ ಎ3 ಆರೋಪಿ ರಾತ್ರೋರಾತ್ರಿ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿದ್ದಾರೆ. ಹೀಗಾಗಿ ಹಿರಿಯ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದು ಕಿಡಿಕಾರಿದರು.
ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಜಿಲ್ಲಾಮಟ್ಟದ ಅಧಿಕಾರಿ ಎಂದಾದರೂ ತನಿಖೆ ನಡೆಸಲು ಸಾಧ್ಯನಾ ಎಂದು ಪ್ರಶ್ನಿಸಿದ ಅವರು, ಈ ಕಾರಣಕ್ಕಾಗಿಯೇ ನವೆಂಬರ್.26ರಂದು ಮೊದಲು ಹೈಕೋರ್ಟ್ ಗಮನಕ್ಕೂ ತರಲಾಗುವುದು. ಬಳಿಕ ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆದೇಶಿಸಬೇಕು. ಆಗ ಮಾತ್ರ ಸಿಬಿಐನವರು ಯಾರ ಮುಲಾಜಿಲ್ಲದೆ ತನಿಖೆ ನಡೆಸುತ್ತಾರೆ. ಅಲ್ಲದೇ ಈ ಮುಡಾ ಪ್ರಕರಣದ ಬಗ್ಗೆ ಅಧಿವೇಶನದ ಮೊದಲ ದಿನವೇ ಸದನದಲ್ಲಿ ಚರ್ಚೆ ನಡೆದರೂ ಅಚ್ಚರಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.