ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಾಡ ಅಧಿದೇವತೆ ನೆಲೆಸಿರುವ ಚಾಮುಂಡಿಬೆಟ್ಟದಲ್ಲಿ ದಿನನಿತ್ಯ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ.
ಚಾಮುಂಡೇಶ್ವರಿ ತಾಯಿಗೆ ಇಷ್ಟವಾದ ತಿನಿಸನ್ನು ಪ್ರಸಾದ ರೂಪದಲ್ಲಿ ವಿನಿಯೋಗ ಮಾಡಲು ತೀರ್ಮಾನ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಚಾಮುಂಡಿಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ರೂಪ ಅವರು, ದಸರಾ ಪ್ರಯುಕ್ತ ಪ್ರತಿ ದಿನವೂ ಒಂದೊಂದು ತಿನಿಸು ತಯಾರಿಸಿ ಪ್ರಸಾದ ರೂಪದಲ್ಲಿ ವಿನಿಯೋಗಿಸಲಾಗುತ್ತದೆ.
ಭಾನುವಾರ ಬಿಸಿಬೇಳೆ ಬಾತ್, ಸೋಮವಾರ ಖಾರ ಪೊಂಗಲ್, ಮಂಗಳವಾರ ಪುಳಿಯೋಗರೆ, ಬುಧವಾರ ಉದ್ದಿನ ಅನ್ನ, ಗುರುವಾರ ಬೆಲ್ಲದ ಅನ್ನ, ಬುಗುರಿಕಾಳು, ಶುಕ್ರವಾರ ಕಾಳುಸಾಸಿವೆ ಅನ್ನ, ಬುಗುರಿಕಾಳು, ಶನಿವಾರ ಎಳ್ಳುಹುಳಿ ಅನ್ನ ವಿನಿಯೋಗ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಮೊದಲಿಗೆ ತಾಯಿ ಚಾಮುಂಡೇಶ್ವರಿಗೆ ನೈವೇದ್ಯ ಮಾಡಿ ಬಳಿಕ ನೈವೇದ್ಯವನ್ನು ಪ್ರಸಾದದಲ್ಲಿ ಮಿಶ್ರಣ ಮಾಡಲಾಗುತ್ತದೆ. ತದನಂತರದಲ್ಲಿ ಆ ಪ್ರಸಾದವನ್ನು ವಿನಿಯೋಗ ಮಾಡಲಾಗುತ್ತದೆ.
ಮಲೆಮಹದೇಶ್ವರ ಬೆಟ್ಟದ ರೀತಿಯ ದಿಟ್ಟಂ ಲಡ್ಡು ತಯಾರಿಸಲಾಗುತ್ತದೆ. ನಂದಿನಿ ತುಪ್ಪದಿಂದಲೇ ಲಡ್ಡು ತಯಾರಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.