ಮೈಸೂರು : ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ದಹಿಸಿದ ದಿನದ ಅಂಗವಾಗಿ ದಲಿತ ಸಂಘರ್ಷ ಸಮಿತಿ ವತಿಯಿಂದ ಮನುಸ್ಮೃತಿಯನ್ನು ಸುಡುವ ಮೂಲಕ ಸಮಾನತೆಯ ಜ್ಯೋತಿಯನ್ನು ಬೆಳಗಿಸಲಾಯಿತು.
ನಗರದ ಪುರಭವನ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಜಮಾಯಿಸಿದ ಕಾರ್ಯಕರ್ತರು ಮನುಸ್ಮೃತಿಯನ್ನು ಸುಟ್ಟು ಜಾತಿ ಬಿಡಿ-ಮತ ಬಿಡಿ, ಮಾನವತೆಗೆ ಜೀವ ಕೊಡಿ ಎನ್ನುವ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಡಿಎಸ್‌ಎಸ್ ಸಂಘಟನಾ ಸಂಚಾಲಕ ಶಂಭುಲಿಂಗಸ್ವಾಮಿ, ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಮುನ್ನುಡಿ ಬರೆದು ಭಾರತವನ್ನು ಅಂಧಕಾರಕ್ಕೆ ತಳ್ಳಿದ್ದ ಮನುಸ್ಮೃತಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಸುಟ್ಟು ಹಾಕಿ ೯೮ ವರ್ಷಗಳಾದವು. ಜಾತಿ ಅಸಮಾನತೆ, ಲಿಂಗ ತಾರತಮ್ಯ, ಮಹಿಳೆಯರ ಮೇಲಿನ ದೌರ್ಜನ್ಯ, ದಬ್ಬಾಳಿಕೆ, ಬಹುಜನರ ಮೇಲೆ ದೌರ್ಜನ್ಯ, ಸತಿ ಸಹಗಮನ ಪದ್ಧತಿ, ಬಾಲ್ಯವಿವಾಹ, ಬೆತ್ತಲೆ ಸೇವೆ, ದೇವದಾಸಿ ಪದ್ಧತಿ, ಶೂದ್ರಾತಿಶೂದ್ರರಿಗೆ ಅಕ್ಷರ ಜ್ಞಾನ ನಿಷಿದ್ಧ ಮೊದಲಾದ ಅನಿಷ್ಟ ಪದ್ಧತಿಗಳು ಶತಮಾನಗಳಿಂದ ಮುಂದುವರಿಯಲು ಕಾರಣವಾದ ಮನುಸ್ಮೃತಿಯನ್ನು ಅಂಬೇಡ್ಕರ್ ಸುಟ್ಟು ಹಾಕಿದ್ದರು. ಸ್ವತಂತ್ರ ಭಾರತಕ್ಕೆ ಸಂವಿಧಾನ ರೂಪಿಸುವ ಸಂದರ್ಭದಲ್ಲಿ ಸಮ ಸಮಾಜ ನಿರ್ಮಾಣದ ಕನಸನ್ನುಹೊತ್ತು ಸಮಾನತೆ, ಸಹೋದರತೆ, ಭಾತೃತ್ವದ ಆಶಯದೊಂದಿಗೆ ದೊಡ್ಡಕೊಡುಗೆ ನೀಡಿದ್ದಾರೆ ಎಂದರು.
ಇದನ್ನು ಓದಿ: ಪಕ್ಷದ ಅಧ್ಯಕ್ಷನಾಗಿ ಬಾವುಟ ಕಟ್ಟಿದ್ದೇನೆ, ಕಸ ಗುಡಿಸಿದ್ದೇನೆ: ಡಿಸಿಎಂ ಡಿ.ಕೆ.ಶಿವಕುಮಾರ್
ಸಂವಿಧಾನ ಸಮರ್ಪಣೆಯಾದ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನ ಮುಖವಾಣಿ ಆರ್ಗನೈಸರ್ ಪತ್ರಿಕೆಯು ನಮ್ಮ ಸಂವಿಧಾನದ ಮೇಲೆ ಅಸಹನೆಯನ್ನು ಹೊರ ಹಾಕಿತ್ತು. ಈ ಸಂವಿಧಾನದಲ್ಲಿ ಭಾರತೀಯತೆ ಇಲ್ಲ, ಸಂವಿಧಾನದ ರಚನೆಕಾರರು ಮನುಸ್ಮೃತಿಯನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಹೇಳಿ ವಿರೋಽಸಿದ್ದರು. ಈಗಲೂ ಪರಿಸ್ಥಿತಿ ಬದಲಾಗಿಲ್ಲ ಎಂದು ಕಿಡಿಕಾರಿದರು.
ಆರ್‌ಎಸ್‌ಎಸ್‌ನ ರಾಜಕೀಯ ಪಕ್ಷವಾದ ಬಿಜೆಪಿಯು ಅಂದಿನಿಂದ ಇಂದಿನವರೆಗೂ ಆಂತರಿಕ, ಬಹಿರಂಗವಾಗಿಯೂ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರುದ್ಧ, ಸಂವಿಧಾನದ ಮೇಲೆ ಅಸಹಿಷ್ಣುತೆಯನ್ನು ಸಂಘಪರಿವಾರ ಹೊರ ಹಾಕುತ್ತಲೇ ಬಂದಿದೆ. ಮನುಪ್ರಣೀತ ಭಾರತವನ್ನು ಬದಿಗೆ ಸರಿಸಿ, ಸಮಾನತೆ ಸಾರಿದ ಬೌದ್ಧತತ್ವ ಪ್ರಣೀತ ಪ್ರಜಾತಾಂತ್ರಿಕ ಸಂವಿಧಾನವನ್ನು ನಾವು ರೂಪಿಸಿಕೊಂಡಿದ್ದನ್ನು ಸಹಿಸದ ಶಕ್ತಿಗಳು ಇಂದು ಮತ್ತಷ್ಟು ಬಲಗೊಳ್ಳುತ್ತಿವೆ ಎಂದು ಆರೋಪಿಸಿದರು.
ಅಂಬೇಡ್ಕರ್ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಸಾರಿರುವ ಯುದ್ಧಕ್ಕೆ ಪ್ರತಿಯಾಗಿ ಜಾಗೃತಿ ಮೂಡಿಸಬೇಕಿದೆ. ಸಂವಿಧಾನ,ಪ್ರಜಾಪ್ರಭುತ್ವನ್ನು ಗಟ್ಟಿ ಮಾಡಬೇಕಾದರೆ ಮನುಸ್ಮೃತಿಯನ್ನು ಸುಟ್ಟು ಹಾಕುವ ಮೂಲಕ ಅಂಬೇಡ್ಕರ್ ಹೋರಾಟವನ್ನು ಮುಂದುವರಿಸಬೇಕಿದೆ ಎಂದು ಸಲಹೆ ನೀಡಿದರು.
ಮೈಸೂರು ಸೇರಿದಂತೆ ಪ್ರತಿಯೊಂದು ತಾಲ್ಲೂಕುಗಳಲ್ಲಿ ಮನುಸ್ಮೃತಿಯನ್ನು ಸುಟ್ಟು ಹಾಕಿ ಸಮಾನತೆಯ ಹಣತೆಯನ್ನು ಹಚ್ಚುವ ಕಾರ್ಯ ಮಾಡಲಾಗಿದೆ ಎಂದರು.
ಲೀಡ್ ಬ್ಯಾಂಕ್ ನಿವೃತ್ತ ಮುಖ್ಯ ವ್ಯವಸ್ಥಾಪಕ ಕೆ.ಎನ್.ಶಿವಲಿಂಗಯ್ಯ, ಪ್ರಕಾಶ್, ತಿಮ್ಮೇಗೌಡ, ಆರ್.ಸೋಮಣ್ಣ, ಶಿವು, ಕಳಸ್ತವಾಡಿ ಶಿವು, ರಾಜಣ್ಣ, ಚಕ್ಕೂರು ಶಿವು, ಮಲ್ಲಿಕಾರ್ಜುನ, ಮಹದೇವಮ್ಮ, ರಮೇಶ್,ಕುಮಾರ್, ತರಕಾರಿ ಮಾರುಕಟ್ಟೆ ಸಂಘದ ಪದಾಽಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.





