ಮೈಸೂರು: ಮೈಸೂರು ನಗರದ ಸಿಸಿಬಿ ಪೊಲೀಸರು ಇಂದು ಮಾದಕ ವಸ್ತುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರಿನಿಂದ ಮೈಸೂರಿಗೆ ಅಕ್ರಮವಾಗಿ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ಜಾಲವನ್ನು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಅಂದಾಜು 5 ಲಕ್ಷ 10 ಸಾವಿರ ರೂಪಾಯಿ ಮೌಲ್ಯದ 51 ಗ್ರಾಂ 83 ಮಿಲಿ ನಿಷೇಧಿತ ಎಂ.ಡಿ.ಎಂ.ಎ ಹಾಗೂ 1 ಲಕ್ಷ 25 ಸಾವಿರ ರೂಪಾಯಿ ಮೌಲ್ಯದ 2 ಕೆಜಿ 230 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಒಟ್ಟು 6 ಲಕ್ಷ 35 ಸಾವಿರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯಕ್ಕೆ ಬಳಸಿದ್ದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ Hyundai i20 ಕಾರನ್ನು ಸಹ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಮೈಸೂರು ನಗರದಲ್ಲಿ ಮಾದಕ ವಸ್ತುಗಳ ಪೂರೈಕೆ, ಮಾರಾಟ, ಸಾಗಾಟ ಹಾಗೂ ಸೇವನೆ ಕುರಿತು ಸಾರ್ವಜನಿಕರು ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.




