ಮೈಸೂರು : ಕಾರು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮೃತಪಟ್ಟಿರುವ ಘಟನೆ ನಗರದ ರಿಂಗ್ ರಸ್ತೆಯಲ್ಲಿ ಸಂಭವಿಸಿದೆ.
ಬನ್ನಿಮಂಟಪದಲ್ಲಿನ ಹನುಮಂತನಗರ ನಿವಾಸಿ ಮೊಹಮ್ಮದ್ ನದೀಂ(೩೪) ಮೃತಪಟ್ಟವರು. ಇವರು ನ.೧೯ ರಂದು ರಾತ್ರಿ ೧೧ ಗಂಟೆ ವೇಳೆಯಲ್ಲಿ ರಿಂಗ್ ರಸ್ತೆಯಲ್ಲಿ ನಾರಾಯಣ ಹೃದಯಾಲಯ ಆಸ್ಪತ್ರೆ ಕಡೆಗೆ ಹೋಗುತ್ತಿದ್ದಾಗ ದೇವೇಗೌಡ ವೃತ್ತದ ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು, ಪರಾರಿಯಾಗಿತ್ತು.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೊಹಮ್ಮದ್ ನದೀಂ ಅವರನ್ನು ತಕ್ಷಣ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ತಡರಾತ್ರಿ ಮೃತಪಟ್ಟಿದ್ದಾರೆ. ಅಪಘಾತವೆಸಗಿದ ಕಾರಿನ ನೋಂದಣಿ ಸಂಖ್ಯೆಯನ್ನು ಸ್ಥಳೀಯರು ಗುರುತು ಹಾಕಿಕೊಂಡಿದ್ದು, ಇದರ ಆಧಾರದಲ್ಲಿ ಮೃತರ ಸಹೋದರ ಎನ್.ಆರ್.ಸಂಚಾರ ಠಾಣೆಗೆ ದೂರು ನೀಡಿದ್ದಾರೆ.
ಇದನ್ನು ಓದಿ: ನಂಜನಗೂಡು| ರಸ್ತೆಯ ಹಳ್ಳ ತಪ್ಪಿಸಲು ಹೋಗಿ ಬೈಕ್ ಸವಾರ ಸಾವು
ಆಟೋ ಪಲ್ಟಿ : ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ಗಾಯ
ಮೈಸೂರು: ಬೈಕ್‌ಗೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡ ಆಟೋ ಪಲ್ಟಿಯಾಗಿದ್ದರಿಂದ ಇಂಜಿನಿಯರಿಂಗ್ ವಿದ್ಯಾರ್ಥಿನಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಗರದ ಎನ್.ಆರ್.ಮೊಹಲ್ಲಾದಲ್ಲಿ ಸಂಭವಿಸಿದೆ.
ಮೊದಲನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ, ನ.೧೯ರಂದು ಬೆಳಿಗ್ಗೆ ೭.೩೦ರ ವೇಳೆಯಲ್ಲಿ ರಾಜೇಂದ್ರ ನಗರದ ಮನೆಯಿಂದ ಕಾಲೇಜಿಗೆ ಆಟೋದಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಚಾಲಕನ ಅಜಾಗರೂಕತೆಯಿಂದಾಗಿ ಆಟೋ, ಮುಂದೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು, ನಂತರ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ.
ಘಟನೆಯಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆಕೆಯ ಭುಜದ ಮೂಳೆ ಮುರಿದಿರುವುದರಿಂದ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಈ ಸಂಬಂಧ ವಿದ್ಯಾರ್ಥಿನಿ ತಂದೆ ನೀಡಿದ ದೂರಿನ ಅನ್ವಯ ಎನ್. ಆರ್.ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.





