Mysore
16
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಮಾನಸಿಕ ಆರೋಗ್ಯ ಸಮಸ್ಯೆಗೆ ಸಂಗೀತ ಮದ್ದು : ಡಾ .ರೇಖಾ ಅರುಣ್ ಅಭಿಮತ

ಮೈಸೂರು: ಮಾನಸಿಕ ಸಮಸ್ಯೆಗಳಿಂದ ಮುಕ್ತವಾಗಬೇಕಿದ್ದರೆ ಸಾಹಿತ್ಯ ಸಂಗೀತದ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು ಡಾ. ರೇಖಾ ಅರುಣ್ ಹೇಳಿದರು.

ಪುರಭವನದಲ್ಲಿ ನಟ ಡಾ. ವಿಷ್ಣುವರ್ಧನ್ ರವರ 74 ನೇ ವರ್ಷದ ಜನ್ಮದಿನದ ಅಂಗವಾಗಿ ಶ್ರೀ ಗಣೇಶ ಮ್ಯೂಸಿಕಲ್ ಗ್ರೂಪ್ಸ್ ವತಿಯಿಂದ ಎ ಕಾಂತರಾಜು ರವರ ಸಾರಥ್ಯದಲ್ಲಿ ಡಾಕ್ಟರ್ ವಿಷ್ಣುವರ್ಧನ್ ಅಭಿನಯದ ಗೀತೆಗಳ ಕರೋಕೆ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಭಿಮಾನಿಗಳ ಅಚ್ಚುಮೆಚ್ಚಿನ ನಟ ಡಾ.ವಿಷ್ಣುವರ್ಧನ್. ಮೇರು ನಟನ ಆದರ್ಶಮಯ ಜೀವನ ಮಾದರಿ. ಸದಾಕಾಲವೂ ಸ್ಥಿತ ಪ್ರಜ್ಞೆ ಹೊಂದಿದ್ದ ಅವರು, ಸಮಾಜವನ್ನು ಆರೋಗ್ಯಕರ ಚಿಂತನೆಗೆ ಹಚ್ಚುವಂತಹ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಕನ್ನಡದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು ಜೊತೆಗೆ ಕಳಂಕರಹಿತರಾಗಿ ಬಾಳಿದ ವಿಷ್ಣು ಅವರು ಯುವ ಸಮುದಾಯದ ಬಗ್ಗೆ ಹೆಚ್ಚು ಒಲವು ಬೆಳೆಸಿಕೊಂಡಿದ್ದರು ಎಂದರು.

ಮೇಲುಕೋಟೆ ವಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ ಮಾತನಾಡಿ, ಕನ್ನಡ ನಾಡು–ನುಡಿ ಬಗೆಗೆ ಅಪಾರ ಕಳಕಳಿ ಹೊಂದಿದ್ದ ಡಾ. ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಕಲಾವಿದ ಎಂದು ಶ್ಲಾಘಿಸಿದರು. ಯುವಜನರಲ್ಲಿ ಭಾಷಾಭಿಮಾನ ಮತ್ತು ದೇಶಾಭಿಮಾನ ಮೂಡಿಸುವಂತಹ ಸದಭಿರುಚಿ ಚಿತ್ರಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದ ಅವರ ಜೀವನ ಕಿರಿಯ ನಟರಿಗೆ ಮಾದರಿ ಎಂದರು.

ಈ ಸಂದರ್ಭದಲ್ಲಿ ಹೃದಯ ತಜ್ಞ ಡಾ. ಮಂಜುನಾಥ್, ಖ್ಯಾತ ಮನೋಶಾಸ್ತ್ರಜ್ಞರು ಡಾ|| ರೇಖಾ ಮನಃಶಾಂತಿ, ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ,ಶ್ರೀ ಗಣೇಶ ಮ್ಯೂಸಿಕಲ್ ಗ್ರೂಪ್ಸ್ ಸಂಸ್ಥಾಪಕರಾದ ಎ ಕಾಂತರಾಜು, ಗಾಯಕರಾದ ಬಿ ನವೀನ್ ಕುಮಾರ್, ಜಯಲಕ್ಷ್ಮಿ ನಾಯ್ಡು, ಲಕ್ಷ್ಮಿ, ಗುರುರಾಜ್ ಹಾಗೂ ಇನ್ನಿತರರು ಹಾಜರಿದ್ದರು.

Tags:
error: Content is protected !!