ಮೈಸೂರು: ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿದ ಅನುಮತಿಯನ್ನು ಹೈಕೋರ್ಟ್ ಎತ್ತಿಹಿಡಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ಮತ್ತೊಬ್ಬ ಅರವಿಂದ್ ಕೇಜ್ರೀವಾಲ್ ಆಗ್ತಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಮೈಸೂರುನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಸಿಎಂ ಕುಟುಂಬವೇ ಮುಡಾ ಅವ್ಯವಹಾರದಲ್ಲಿ ತೊಡಗಿತ್ತು. ತನ್ನ ಭೂಮಿಯೇ ಅಲ್ಲದಿದ್ದರೂ ಪರಿಹಾರ ಪಡೆದುಕೊಂಡಿದ್ದರು. ಬಿಜೆಪಿ ಹೋರಾಟಕ್ಕೆ ಸಿಎಂ ಗೌರವ ಕೊಟ್ಟರಲಿಲ್ಲ. ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕಾಯಿತು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣವೇ ರಾಜೀನಾಮೆ ಕೊಡಬೇಕು. ಕೊಡದಿದ್ದರೆ ಮತ್ತೊಬ್ಬ ಕೇಜ್ರಿವಾಲ್ ಆಗುತ್ತಾರೆ. ಹೊಸದಿಲ್ಲಿಯಲ್ಲಿ ಪೊಲೀಸ್ ವ್ಯವಸ್ಥೆ ಸಿಎಂ ಬಳಿ ಇಲ್ಲ. ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಗಳು ಸಿಎಂ ಅಧೀನದಲ್ಲಿದ್ದಾರೆ. ತನಿಖೆ ನಡೆಸುವ ಅಧಿಕಾರಿಯ ಮುಂದೆ ಹಾಜರಾಗುವಾಗ ಯಾವ ಮುಖ ಹೊತ್ತು ಹೋಗುತ್ತಾರೆ ಎಂದು ಟೀಕಿಸಿದರು. ಮೌಲ್ಯ ಎತ್ತಿಹಿಡಿಯಲು ಸಿಎಂ ರಾಜೀನಾಮೆ ಕೊಡಬೇಕು. ಸಿಎಂ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಹೈಕಮಾಂಡ್ ಬೆಂಬಲಕ್ಕೆ ನಿಂತರೂ ಸಾಧ್ಯವಾಗಲ್ಲ. ೧೩೬ ಶಾಸಕರ ಬೆಂಬಲ ಇದ್ದರೂ ಕೂಡ ನ್ಯಾಯಾಲಯದ ತೀರ್ಪು ಬೇರೆಯಾಗಿದೆ. ಕಾನೂನಿನ ಮುಂದೆ ಶರಣಾಗಬೇಕು. ಹೈಕಮಾಂಡ್‌ಗೂ-ಸಿಎಂವಿರುದ್ದದ ತೀರ್ಪಿಗೂ ಸಂಬಂಧವಿಲ್ಲ ಎಂದು ನುಡಿದರು.