ಮೈಸೂರು: ನಾಡಿನೆಲ್ಲೆಡೆ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದ್ದು, ರಾಜವಂಶಸ್ಥ ಹಾಗೂ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದು ಕುಟುಂಬ ಸಮೇತರಾಗಿ ತ್ರಿನೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಹಾಗೂ ಮಗನೊಂದಿಗೆ ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಾಲಯಕ್ಕೆ ತೆರಳಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಯದುವೀರ್ ಒಡೆಯರ್ ಹಾಗೂ ತ್ರಿಷಿಕಾ ದಂಪತಿಗೆ ಶಾಲು ಹೊದಿಸಿ ಗೌರವಿಸಲಾಯಿತು.
ಇಂದು ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ತ್ರಿನೇಶ್ವರನಿಗೆ ಚಿನ್ನದ ಮುಖವಾಡ ಧರಿಸಿ ವಿಶೇಷ ಅರ್ಚನೆ ಹಾಗೂ ಪಂಚಾಮೃತ ಅಭಿಷೇಕ ನೆರವೇರಿಸಲಾಗಿದೆ.
ಇಂದು ತ್ರಿನೇಶ್ವರ ದೇವಾಲಯಕ್ಕೆ ಸಾವಿರಾರು ಮಂದಿ ಸಾರ್ವಜನಿಕರು ಭೇಟಿ ನೀಡಿ ಶಿವನ ಆಶೀರ್ವಾದ ಪಡೆದು ಪುನೀತರಾಗುತ್ತಿದ್ದಾರೆ.




