ಮೈಸೂರು: ರಾಜ್ಯದಲ್ಲಿ ಸಾವಿರಾರು ಕುಟುಂಬಗಳು ಮೈಕ್ರೋ ಫೈನಾನ್ಸ್‌ಗಳು ನೀಡುತ್ತಿರುವ ಕಿರುಕುಳಕ್ಕೆ ಬೇಸತ್ತು ಮನೆ ತೊರೆದಿರುವ, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಈ ಫೈನಾನ್ಸ್‌ಗಳ ಕಿರುಕುಳಕ್ಕೆ ರಾಜ್ಯ ಗೃಹ ಇಲಾಖೆಯ ವೈಫಲ್ಯವೇ ಕಾರಣ ಎಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಆರೋಪಿಸಿದ್ದಾರೆ.
ಈ ಬಗ್ಗೆ ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್‌ಗಳಿಂದ ಸಾಲ ಪಡೆಯುತ್ತಿರುವವರು ಸಂಕಷ್ಡದಲ್ಲಿರುವ ಬಡವರು. ಕೂಲಿ ಕಾರ್ಮಿಕರು, ರೈತರು, ಸಣ್ಣ ವ್ಯಾಪಾರಿಗಳು ಇನ್ನಿತರರನ್ನು ಕೇಂದ್ರಿಕರಿಸಿ ಕಿರು ಸಾಲ ನೀಡುವ ಈ ಸಂಸ್ಥೆಗಳು ಸಕಾಲದಲ್ಲಿ ಸಾಲ ಕಟ್ಟದಿದ್ದರೆ ದಂಡ ರೂಪದಲ್ಲಿ ಶುಲ್ಕ ವಿಧಿಸಿ ಜನರನ್ನು ಸಾಲದ ಕೂಪದಲ್ಲಿ ನರಳಿಸುತ್ತಿದ್ದಾರೆ.
ಮೈಕ್ರೋ ಫೈನಾನ್ಸ್‌ಗಳಿಂದ ಸಾಲಗಳಿಗೆ ವಾರ್ಷಿಕವಾಗಿ 20% ನಿಂದ 25% ವರೆಗೆ ಬಡ್ಡಿ ವಿಧಿಸಲಾಗುತ್ತದೆ. ಜೊತೆಗೆ ಪ್ರೋಸೆಸಿಂಗ್ ಫೀಸ್ 1% ಹಾಗೂ ಇನ್ಸುರೆನ್ಸ್ ಫೀಸ್ 1% ವಿಧಿಸಲಾಗುತ್ತಿದೆ.
ಆರ್‌ಬಿಐ ಮಾನದಂಡಗಳನ್ನು ಗಾಳಿಗೆ ತೂರಿ ಸಾಲ ತೆಗೆದುಕೊಂಡವರನ್ನು ಬೆದರಿಸಿ ಆತ್ಮಹತ್ಯೆಗೆ ಶರಣಾಗುವಂತೆ, ಊರು ತೊರೆಯುವಂತೆ ಈ ಕಿರು ಸಂಸ್ಥೆಗಳು ಪ್ರೇರೇಪಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಸಾಲಗಾರ ಕುಟುಂಬಗಳ ಮನೆ ಜಪ್ತಿ ಕಾರ್ಯಗಳು ಸಹ ಆರಂಭವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೀಟರ್ ದಂಧೆಯವರ ಕಿರುಕುಳವನ್ನು ಮೀರಿ ಈ ಕಿರು ಸಂಸ್ಥೆಗಳು ಸಾಮಾನ್ಯ ಜನರಿಗೆ ಕಿರುಕುಳ ನೀಡುತ್ತಿದ್ದಾರೆ. ಸರ್ಕಾರ ಮುಗ್ದ ಜನರ ನೆರವಿಗೆ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿದರು.
ರಾಜ್ಯದ ಗೃಹ ಇಲಾಖೆ, ಹಣಕಾಸು ಇಲಾಖೆ ಹಾಗು ಕಾನೂನು ಇಲಾಖೆ ಜಂಟಿಯಾಗಿ ಒಂದು ಸಮಿತಿ ರಚಿಸಿ ಮೈಕ್ರೋ ಫೈನಾನ್ಸ್‌ಗಳ ಹಾವಳಿಗೆ ಕಡಿವಾಣ ಹಾಕುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಆರ್‌ಬಿಐ ಅಧಿಕಾರಿಗಳೊಂದಿಗೆ ಸರ್ಕಾರ ತುರ್ತು ಸಭೆ ನಡೆಸಿ ಕಾನೂನಾತ್ಮಕ ತೀರ್ಮಾನ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದು ತಿಳಿಸಿದರು.