ಮೈಸೂರು: ಜಾತಿಗಣತಿ ವರದಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದ್ದು, ಜಾತಿ ಗಣತಿ ವರದಿಯಿಂದ ಯಾವುದೇ ಜಾತಿ ಸಮುದಾಯಕ್ಕೂ ಅನ್ಯಾಯವಾಗುವುದಿಲ್ಲ ಎಂಬ ನಂಬಿಕೆ ಇದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಇಂದು(ಜನವರಿ.17) ಅಂತರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ವತಿಯಿಂದ ಆಯೋಜಿಸಿರುವ ಮೂರು ದಿನಗಳ ವೀರಶೈವ ಲಿಂಗಾಯತ ಬಿಸಿನೆಸ್ ಕಾಂಕ್ಲೇವ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿಗಣತಿಯಲ್ಲಿ ಲಿಂಗಾಯತ, ಒಕ್ಕಲಿಗ ಉಪ ಪಂಗಡಗಳನ್ನು ಅದೇ ಜಾತಿಯ ಅಡಿಯಲ್ಲಿ ಪರಿಗಣಿಸಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ. ಅದಕ್ಕೆ ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಅದನ್ನು ತೆರೆದ ನಂತರವೇ ಅದರ ಸಾಧಕ-ಬಾಧಕಗಳು ತಿಳಿಯುವುದು. ಅದಕ್ಕೂ ಮುನ್ನ ಜಾತಿಗಣತಿ ವರದಿ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.
ರಾಜ್ಯದಲ್ಲಿ ಮೀಸಲಾತಿ ವಿಚಾರವಾಗಿ ಲಿಂಗಾಯ ಉಪ್ಪಾರ, ಕುರುಬ, ಕುಂಬಾರ, ಹಡಪದ, ಗಾಣಿಗ ಸೇರಿದಂತೆ ಮುಂತಾದ ಉಪ ಪಂಗಡಗಳು ಲಿಂಗಾಯತ ಬದಲು ಹಿಂದೂ ಎಂದೇ ಬರೆಸಿವೆ. ಅಲ್ಲದೇ 2ಎ ಮೀಸಲಾತಿಗಾಗಿ ಗಾಣಿಗ ಲಿಂಗಾಯತರೂ ಹಿಂದೂ ಗಾಣಿಗ ಎಂದೂ 3ಎ ಮೀಸಲಾತಿಗೆ ರೆಡ್ಡಿ ಲಿಂಗಾಯತರು ಹಿಂದೂ ರೆಡ್ಡಿ ಎಂದೇ ದಾಖಲಿಸಿಕೊಂಡಿದ್ದಾರೆ. ಆದರೆ ಅದನ್ನು ನಾನು ತಪ್ಪು ಎಂದೂ ಹೇಳಲಾರೆ. ಏಕೆಂದರೆ ಅವರಿಗೆ ಬೇಕಿರುವುದು ಶೈಕ್ಷಣಿಕ ಮತ್ತು ಉದ್ಯೋಗ ಮೀಸಲಾತಿ ಅಷ್ಟೇ ಎಂದು ಹೇಳಿದರು.
ಲಿಂಗಾಯತ ಸಮುದಾಯ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡಿದ್ದರೆ ಈ ಎಲ್ಲ ಉಪ ಪಂಗಡಗಳಿಗೂ ನ್ಯಾಯ ದೊರೆಯುತ್ತಿತ್ತು. ಆದರೆ ಸ್ವತಂತ್ರ ಧರ್ಮ ಹೋರಾಟವನ್ನು ವಿರೋಧಿಸಿದವರಿಗೆ ಇಂದು ಅದೆಲ್ಲಾ ಅರ್ಥವಾಗುತ್ತದೆ. ಇದನ್ನೇ ನಾನು ವೀರಶೈವ ಮಹಾ ಅಧೀವೇಶನದಲ್ಲಿ ಕಾಶಿ ಸ್ವಾಮೀಜಿ ಅವರಿಗೂ ಹೇಳಿದ್ದೇನೆ. ಸಮಾಜದಲ್ಲಿ ಎಲ್ಲಾ ಸಮುದಾಯದವರು ಒಗ್ಗಟ್ಟಾಗಿದ್ದರೆ ಮಾತ್ರ ರಾಜಕೀಯ ಶಕ್ತಿಯಾಗಿ ಉಳಿಯುತ್ತದೆ. ಇಲ್ಲವಾದರೆ ನಿರಾಶರಾಗಿ ಹೋಗುತ್ತವೆ ಎಂದು ತಿಳಿಸಿದರು.
ನಾನು ಸಿಎಂ ಕುರ್ಚಿಗೆ ಟಿಕೆಟ್ ಆಕಾಂಕ್ಷಿಯಲ್ಲ
ನಗರದಲ್ಲಿ ಇಂದು ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಅಲ್ಲದೇ ನಾನು ಆ ಸ್ಥಾನಕ್ಕೆ ಆಕಾಂಕ್ಷಿಯೂ ಅಲ್ಲ. ಇನ್ನೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಹೇಳಿದರು.