ಮೈಸೂರು: ಭಾರತದ ಮೂರನೇ ಅತಿದೊಡ್ಡ ನಂದಿ ವಿಗ್ರಹ ಎಂಬ ಖ್ಯಾತಿಗೆ ಒಳಗಾಗಿರುವ ಚಾಮುಂಡಿ ಬೆಟ್ಟದ ನಂದಿಗೆ ಇಂದು ಮಹಾಮಸ್ತಾಭಿಷೇಕ ನೆರವೇರಿಸಲಾಯಿತು.
ಚಾಮುಂಡಿ ಬೆಟ್ಟ ಬಳಗ ಚಾರಿಟಬಲ್ ಟ್ರಸ್ಟ್‌ನಿಂದ ಇಂದು 19ನೇ ವರ್ಷದ ಮಹಾಮಸ್ತಾಭಿಷೇಕ ನೆರವೇರಿದ್ದು, ಅಭಿಷೇಕದಲ್ಲಿ ನಂದಿ ವಿಗ್ರಹಕ್ಕೆ 34 ಬಗೆಯ ದ್ರವ್ಯಗಳು ಸೇರಿದಂತೆ 38 ವಿಧಗಳಲ್ಲಿ ಅಭಿಷೇಕ ನೆರವೇರಿಸಲಾಯಿತು.
ಈ ನಂದಿ ವಿಗ್ರಹವು 1659 ರಿಂದ 1673ರವರೆಗೆ ಮೈಸೂರು ಸಂಸ್ಥಾನವನ್ನಾಳಿದ ದೊಡ್ಡ ದೇವರಾಜ ಒಡೆಯರ್ ಕಾಲದಲ್ಲಿ ನಿರ್ಮಾಣವಾಗಿದ್ದು, 350ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿದೆ.
ಇದನ್ನು ಚಾಮುಂಡಿ ಬೆಟ್ಟವನ್ನು ಕಾಲ್ನಡಿಗೆಯ ಮೂಲಕ ಹತ್ತುವಾಗ 700 ಮೆಟ್ಟಿಲುಗಳ ಬಳಿ ಏಕಶಿಲಾ ಮೂರ್ತಿಯನ್ನಾಗಿ ಕೆತ್ತನೆ ಮಾಡಲಾಗಿದೆ. ಅಲ್ಲದೇ ಈ ವಿಗ್ರಹವು 16 ಅಡಿ ಎತ್ತರ ಹಾಗೂ 25 ಅಡಿ ಉದ್ದವಿದೆ.
ಚಾಮುಂಡಿ ಬೆಟ್ಟದಲ್ಲಿರುವ ಈ ನಂದಿ ವಿಗ್ರಹವು ತಮಿಳುನಾಡಿನ ತಂಜಾವೂರಿನ ಬೃಹದೇಶ್ವರ ದೇವಾಲಯದ ನಂದಿ ಹಾಗೂ ಆಂಧ್ರ ಪ್ರದೇಶದ ಲೇಪಾಕ್ಷಿಯ ವೀರಭದ್ರ ದೇವಸ್ಥಾನದ ನಂದಿಯನ್ನು ಬಿಟ್ಟರೆ, ಇದೇ ದೇಶದ ಮೂರನೇ ನಂದಿ ವಿಗ್ರಹವಾಗಿದೆ.