ಮೈಸೂರು: ಪತ್ರಕರ್ತನ ಮೇಲೆ ನಿಂದನೆ ಮಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪತ್ರಕರ್ತನ ಮೇಲೆ ಪ್ರತಾಪ್ ಸಿಂಹ ನಿಂದಿಸಿರುವ ಬಗ್ಗೆ ಪತ್ರಕರ್ತರ ಸಂಘದ ಅಧ್ಯಕ್ಷ ಕೆ ದೀಪಕ್ ನೀಡಿರುವ ಹೇಳಿಕೆಗೆ ನಮ್ಮ ಬೆಂಬಲವಿದೆ. ಮುಂದಿನ ದಿನಗಳಲ್ಲಿ ಉಳಿದ ಪತ್ರಕರ್ತರಿಗೂ ಇದೇ ಪರಿಸ್ಥಿತಿ ಆಗಬಹುದು. ದಿನ ಬೆಳಗಾದರೆ ಸಿದ್ದರಾಮಯ್ಯ, ಡಿಕೆಶಿ ಬಗ್ಗೆ ಮಾತನಾಡುವುದೇ ಪ್ರತಾಪ್ ಸಿಂಹನ ಕೆಲಸ. ಈತನ ಬಗ್ಗೆ ಕೇಸ್ ದಾಖಲಿಸಬೇಕು. ಈ ಬಗ್ಗೆ ಜಿಲ್ಲಾ ಪತ್ರಕರ್ತರ ಸಂಘ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಇನ್ನು ಮದ್ದೂರಿನಲ್ಲಿ ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆಯಲ್ಲಿ ಬಿಜೆಪಿ ನಾಯಕರು ಭಾಗಿಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿ ಹೆಸರೇಳಲು ಯಾರು ಇಲ್ಲ, ಅದಕ್ಕಾಗಿ ಬಿಜೆಪಿ ಮದ್ದೂರಿಗೆ ಲಗ್ಗೆಯಿಟ್ಟಿದೆ. ಜೆಡಿಎಸ್ ಒಳಗೆ ಬಿಟ್ಟಿಕೊಂಡಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ತಲೆ ಎತ್ತಬೇಕಾದರೆ ಜೆಡಿಎಸ್ ಕಾರಣ.
ಮಂತ್ರಿ ಕೊಟ್ಟಿದ್ದಾರೆಂದು ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್‌ನ್ನು ಬಿಜೆಪಿಗೆ ಅಡವಿಟ್ಟಿದ್ದಾರೆ. ಹಳೇ ಮೈಸೂರು ಭಾಗವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಪ್ಲಾನ್ ಮಾಡಿದೆ. ಮದ್ದೂರು ಪ್ರಕರಣವನ್ನು NIAಗೆ ವಹಿಸಿ. ಬೇರೆ ಪ್ರಕರಣವನ್ನು NIAಗೆ ವಹಿಸಿ ಎನ್ನುವ ಬಿಜೆಪಿಗರು ಮದ್ದೂರು ಪ್ರಕರಣವನ್ನೇಕೆ NIAಗೆ ವಹಿಸುವ ಬಗ್ಗೆ ಮಾತನಾಡಲ್ಲ ಎಂದು ಪ್ರಶ್ನೆ ಮಾಡಿದರು.
ಇನ್ನು ಮದ್ದೂರು ಗಲಾಟೆಯಲ್ಲಿ ಇದ್ದ ಜ್ಯೋತಿ ಎಂಬ ಹುಡುಗಿಗೆ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ನೀಡುತ್ತಾರಂತೆ. ಬಿಜೆಪಿಯವರು ಆಕೆಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡುವವರೆಗೂ ಹೋಗಿದ್ದರು. ಆದರೆ ಆಕೆಯ ಚಲನವಲನ ನೋಡಿ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಆಕೆ ತನ್ನ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಎಲ್ಲವನ್ನು ಹೇಳಿಕೊಂಡಿದ್ದಾಳೆ. ಇದನ್ನು ನೋಡಿ ಬಿಜೆಪಿ ಸುಮ್ಮನಾಗಿದೆ. ಜ್ಯೋತಿ ಎಂಬ ಹುಡುಗಿ ಮುಸ್ಲಿಂಮರನ್ನು ಬೈದು ನಿಂದಿಸಿದ್ದಾಳೆ ಎಂದು ಕಿಡಿಕಾರಿದರು.
ಇನ್ನು ಮದ್ದೂರು ಗಲಾಟೆ ಕುರಿತು ಮಾತನಾಡಿದ ಅವರು, 24 ಮಂದಿಯು ಕಲ್ಲು ಹೊಡೆದಿದ್ದಾರಾ?. ಯಾವ ಆಧಾರದ ಮೇಲೆ ಅವರನ್ನೆಲ್ಲಾ ಅರೆಸ್ಟ್ ಮಾಡಿದ್ದೀರಾ ತಿಳಿಸಿ. ಬಿಜೆಪಿ ಓಲೈಕೆಗೆ ಸಿಕ್ಕ ಸಿಕ್ಕವರನ್ನು ಅರೆಸ್ಟ್ ಮಾಡಿದ್ರೆ ಹೇಗೆ. ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಪೊಲೀಸರು ಪ್ರಯತ್ನ ಮೀರಿ ಒಳ್ಳೆ ಕೆಲಸ ಮಾಡಿದ್ದಾರೆ. ಆದರೆ 24 ಜನರು ಕಲ್ಲು ಹೊಡೆದಿದ್ದಾರಾ? ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಗೊತ್ತಾಗಬೇಕಿದೆ. ರಾಮ್ ರಹೀಮ್ ನಗರದಲ್ಲಿ 144 ಸೆಕ್ಷನ್ ಜಾರಿ ಇತ್ತು. ಹೀಗಿದ್ದರು ಹೇಗೆ ಹೋದರು. ಉದ್ದೇಶಪೂರ್ವಕವಾಗಿ ಗಲಾಟೆ ನಡೆದಿದೆ. ಬಿಜೆಪಿಯವರೇ ಕಲ್ಲು ತೂರಾಟ ಮಾಡಿರಬೇಕು. ಮಸೀದಿಯಿಂದ ಕಲ್ಲು ತೂರಾಟವಾಗಿಲ್ಲ ಎಂದು ಐಜಿಪಿ ಸ್ಪಷ್ಟನೆ ನೀಡಿದ್ದಾರೆ ಎಂದರು.





