ಮೈಸೂರು: ಇಲ್ಲಿನ ಲಿಂಗಾಂಬುಧಿ ಕೆರೆಯ ಆವರಣದಲ್ಲಿ ಇಂದು ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಜನರಿಗೆ ಚಿರತೆಯೊಂದು ಕಾಣಿಸಿಕೊಂಡಿದೆ.
ಸ್ಥಳೀಯರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಸ್ಥಳಕ್ಕೆ ಜಮಾಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಸದ್ಯ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಕೈಗೊಂಡಿರುವ ಹಿನ್ನೆಲೆಯಲ್ಲಿ ಲಿಂಗಾಂಬುಧಿ ಕೆರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಎದುರಾಗಿದ್ದು, ಆದಷ್ಟು ಬೇಗ ಚಿರತೆಯನ್ನು ಸೆರೆಹಿಡಿಯುವಂತೆ ಮನವಿ ಮಾಡಿದ್ದಾರೆ.
ಇನ್ನು ಲಿಂಗಾಂಬುಧಿ ಕೆರೆಯು ವಾಯುವಿಹಾರಿಗಳಿಗೆ ನೆಚ್ಚಿನ ತಾಣವಾಗಿದ್ದು, ಬೆಳ್ಳಂಬೆಳಿಗ್ಗೆ ಇಲ್ಲಿಗೆ ನೂರಾರು ಜನ ಭೇಟಿ ನೀಡುತ್ತಿದ್ದರು. ಆದರೆ ಈಗ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಆದಷ್ಟು ಬೇಗ ಚಿರತೆಯನ್ನು ಸೆರೆಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.