ಮಂಡ್ಯ : ರಾಜ್ಯದಾದ್ಯಂತ ಈಗಾಗಲೇ ಉತ್ತಮ ಮಳೆಯಾಗಿದ್ದು, ಎಲ್ಲಾ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗುತ್ತಿವೆ. ಕೇರಳ ಹಾಗೂ ವಯನಾಡು ಭಾಗದಲ್ಲಿ ಉತ್ತಮವಾದ ಮಳೆಯಾಗಿರುವ ಕಾರಣ ಜಿಲ್ಲೆಯ ಕೆ ಆರ್ ಎಸ್ ಜಲಾಶಯದ ಒಳ ಹರಿವಿನ ಮಟ್ಟ ಏರಿಕೆಯಾಗಿದ್ದು, ಜಲಾಶಯ ತುಂಬಿ ತುಳುಕುತ್ತಿದೆ.
ಮಳೆ ಆರಂಭಕ್ಕೂ ಮೊದಲು ನೀರು ಇಲ್ಲದೆ ಖಾಲಿ ಖಾಲಿಯಾಗಿದ್ದ ಜಲಾಶಯ ಈಗ ಭರ್ಜರಿ ಮಳೆಯಿಂದ ತುಂಬಿದೆ. ಇದರಿಂದಾಗಿ ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದೆ. ಅದರಲ್ಲೂ ವೇಣುಗೋಪಾಲಸ್ವಾಮಿ ದೇವಸ್ಥಾನದ ಹಿಂದೆ ಇರುವ ಹಿನ್ನೀರಿನಲ್ಲಿ ಈಗ ಪ್ರವಾಸಗರ ದಂಡೆ ಹರಿದುಬರುತ್ತಿದೆ.
ಜಲಾಶಯದ ತುಂಬಿ ತುಳುಕುತ್ತಿರುವುದರಿಂದ ಹಿನ್ನೀರು ಸಮುದ್ರದಂತೆ ಅಲೆಗಳು ಏಳುತ್ತಿದ್ದು ಜನರಿಗೆ ಒಂದು ಕಡಲ ಕಿನಾರೆ ರೀತಿ ಅನುಭವವನ್ನು ಕೊಡುತ್ತಿದೆ. ಹೀಗಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕೂಡ ಈ ಕೆ.ಆರ್ ಎಸ್ ಬ್ಯಾಕ್ ವಾಟರ್ ಗೆ ಬಂದು ನೀರಿನ ಬಳಿ ಆಟ ಆಡಿ, ಮೋಜು ಮಾಡಿಕೊಂಡು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ. ಇನ್ನ ಕೆಲವರು ತಮ್ಮ ಒತ್ತಡದ ಬದುಕು, ಸಾಕಷ್ಟು ಜವಾಬ್ದಾರಿಗಳ ನಡುವೆ ಈ ಬ್ಯಾಕ್ ವಾಟರ್ ಗೆ ಬಂದು ತಮ್ಮ ಕಷ್ಟ ಸುಖ, ನೋವು ನಲಿವು ಎಲ್ಲವನ್ನು ಮರೆತು ಸಮುದ್ರ ಅಲೆಗಳಂತೆ ಅಪ್ಪಳಿಸುತ್ತಿರುವ ಹಿನ್ನೀರನ್ನ ನೋಡಿ ರಿಲ್ಯಾಕ್ಸ್ ಮಾಡುತ್ತಿದ್ದಾರೆ.