ಮೈಸೂರು: ನಮ್ಮ ಸರ್ಕಾರ ಹೇಳಿದಂತೆ ಪ್ರತಿ ತಿಂಗಳು ಗೃಹಲಕ್ಷ್ಮೀ ಹಣ ನೀಡುತ್ತೇವೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದ್ದಾರೆ.
ಗೃಹಲಕ್ಷ್ಮೀ ಹಣದ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಹೇಳಿಕೆ ತಿರುಚಲಾಗಿದೆ ಎಂದರು. ಇದಕ್ಕೆ ಮಾಧ್ಯಮ ಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಕ್ಷಣ ವರಸೆ ಬದಲಿಸಿದ ರಾಜಣ್ಣ ಅವರು, ಡಿ.ಕೆ.ಶಿವಕುಮಾರ್ ಆ ರೀತಿ ಹೇಳಿರುವ ಬಗ್ಗೆ ನನಗೆ ಅನುಮಾನವಿದೆ. ನನಗೆ ಆ ರೀತಿ ಅವರು ಹೇಳಿದ್ದಾರೆ ಅನ್ನಿಸುವುದಿಲ್ಲ. ನಮ್ಮ ಸರ್ಕಾರ ಹೇಳಿದಂತೆ ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ನೀಡುತ್ತೇವೆ. ಕೆಲ ತಾಂತ್ರಿಕ ಕಾರಣಗಳಿಂದ ಕೆಲ ತಿಂಗಳ ಹಣ ಬಂದಿಲ್ಲ ಅಷ್ಟೇ. ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ನೀಡಲು ನಾವು ಬದ್ಧ ಎಂದು ಸ್ಪಷ್ಟನೆ ನೀಡಿದರು.
ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಅವಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೆರೆ, ಕಾಲುವೆ, ಚರಂಡಿ ಒತ್ತುವರಿಯಿಂದ ಈ ಪರಿಸ್ಥಿತಿ ಬಂದಿದೆ. ನೀರು ಹೇಗೆ ಹರಿಯಬೇಕು ಎಂದು ನಾವು ಹೇಳಲು ಸಾಧ್ಯವಿಲ್ಲ. ಆದರೆ ಅದಕ್ಕೆ ಅದರ ದಾರಿ ಗೊತ್ತಿದೆ. ಮೋರಿ, ಚರಂಡಿ, ಕಾಲುವೆ ಮುಚ್ಚಿದ ಪರಿಣಾಮ ಈ ರೀತಿ ಅಗಿದೆ. ಸಾಧನಾ ಸಮಾವೇಶ ಮುಗಿದ ನಂತರ ಎಲ್ಲರಿಂದಲೂ ಪರಿಶೀಲನೆ ನಡೆಯಲಿದ್ದು, ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲಾಗುತ್ತದೆ. ರಾಜಕಾಲುವೆ ಒತ್ತುವರಿಯನ್ನು ನಿರಂತರವಾಗಿ ಮಾಡಲಾಗುವುದು. ಹಿಂದಿನ ಸರ್ಕಾರ ಅರ್ಧಂಬರ್ಧ ಮಾಡಿದೆ. ನಾವು ಮಳೆ ಬಂದಾಗ ಮಾತ್ರವಲ್ಲ ಎಲ್ಲಾ ಸಮಯದಲ್ಲೂ ಒತ್ತುವರಿ ತೆರವು ಕಾರ್ಯ ನಡೆಸುತ್ತಿದ್ದೇವೆ. ಡಿಸಿಎಂ ಡಿ.ಕೆ.ಶಿವಕುಮಾರ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.





