ಮೈಸೂರು: ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಮರಾಠಿ ಪುಂಡರ ಹಲ್ಲೆ ಪ್ರಕರಣ ಶುರುವಾದ ಸಮರ ಈಗ ಕರ್ನಾಟಕ ಬಂದ್‌ವರೆಗೂ ಬಂದಿದ್ದು, ಇಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್‌ಗೆ ಮೈಸೂರು ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹುತೇಕ ಸಂಘಟನೆಗಳು ನೈತಿಕ ಬೆಂಬಲ ಘೋಷಿಸಿದ್ದವು. ಹೋಟೆಲ್ ಮಾಲೀಕರ ಸಂಘ, ಖಾಸಗಿ ಬಸ್ ಮಾಲೀಕರ ಸಂಘ, ಮೈಸೂರು ಜಿಲ್ಲಾ ವಕೀಲರ ಸಂಘ ಸೇರಿದಂತೆ ಹಲವು ಸಂಘಟನೆಗಳು ನೈತಿಕ ಬೆಂಬಲ ಘೋಷಿಸಿದ್ದವು.
ಆದರೆ ಇಂದಿನ ಬಂದ್ ಸಂಪೂರ್ಣ ವಿಫಲವಾಗಿದ್ದು, ಸಾರಿಗೆ ಬಸ್‌ಗಳು ಎಂದಿನಂತೆ ಸಂಚಾರ ಮಾಡುತ್ತಿವೆ. ಬೆಳಿಗ್ಗೆ 7 ಗಂಟೆಗೆ ಕನ್ನಡ ಪರ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆ ಬಿಟ್ಟರೆ, ಬೇರೆ ಎಲ್ಲೂ ಕೂಡ ಬಂದ್ ಇದೆ ಎಂಬುದೇ ಜನರಿಗೆ ಕಾಣುತ್ತಿಲ್ಲ.
ಬೆಳಿಗ್ಗೆ 8 ಗಂಟೆಯ ಮೇಲೆ ಮೈಸೂರು ಸಹಜ ಸ್ಥಿತಿಗೆ ಮರಳಿದ್ದು, ಎಂದಿನಂತೆ ಜನಸಂಚಾರ ಹಾಗೂ ಎಲ್ಲಾ ಕಡೆ ವಾಹನಗಳು ಸಂಚರಿಸುತ್ತಿವೆ.
ಇನ್ನು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಬಲವಂತವಾಗಿ ಬಂದ್ ಮಾಡಿಸುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ.
ಒಟ್ಟಾರೆಯಾಗಿ ಇಂದಿನ ಬಂದ್ ಸಂಪೂರ್ಣ ವಿಫಲವಾಗಿದ್ದು, ಬರೀ ಪ್ರತಿಭಟನೆಗೆ ಸೀಮಿತವಾಗಿದೆ.