ಮೈಸೂರು: ಸಚಿವ ಸ್ಥಾನದಿಂದ ಕೆ.ಎನ್.ರಾಜಣ್ಣ ಅವರನ್ನು ವಜಾಗೊಳಿಸಿರುವ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ನಾಯಕ ಸಮುದಾಯ ತಿರುಗಿಬಿದ್ದಿದ್ದು, ಇದೇ ಸೋಮವಾರ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ನಾಯಕರ ಯುವ ಸೇನೆ ರಾಜ್ಯಾಧ್ಯಕ್ಷ ದೇವರಾಜ ಕಾಟೂರು ಅವರು, ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ವತಿಯಿಂದ ಸೋಮವಾರ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ. ಕೆ.ಎನ್.ರಾಜಣ್ಣ ನಮ್ಮ ಸಮುದಾಯದ ಬಹುದೊಡ್ಡ ಶಕ್ತಿ. ನಮ್ಮ ಸಮುದಾಯ ಎಸ್.ಟಿ ಮೀಸಲು ಕ್ಷೇತ್ರಗಳಲ್ಲಿ ಎಲ್ಲಾ ಶಾಸಕರನ್ನು ಕಾಂಗ್ರೆಸ್ ಪಕ್ಷದವರನ್ನೇ ಆಯ್ಕೆ ಮಾಡಿದೆ. ಸರ್ಕಾರದಲ್ಲಿ ಸಮುದಾಯದ 15 ಜನ ಶಾಸಕರಿದ್ದಾರೆ.
ಇಂತಹ ದೊಡ್ಡ ಸಮುದಾಯಕ್ಕೆ ರಾಜಕೀಯವಾಗಿ ಕಾಂಗ್ರೆಸ್ ಅವಮಾನ ಮಾಡುತ್ತಿದೆ. ಯಾವುದೇ ತನಿಖೆ ನಡೆಸದೆ ನಾಗೇಂದ್ರರವರ ರಾಜೀನಾಮೆ ಪಡೆಯಲಾಯ್ತು. ಇದೀಗ ಕೆ.ಎನ್.ರಾಜಣ್ಣರನ್ನು ಸಚಿವ ಸ್ಥಾನದಿಂದ ವಜಾ ಮಾಡಿದ್ದಾರೆ. ನಾವೇ ಬೆಂಬಲಿಸಿದ್ದ ಸರ್ಕಾರದ ವಿರುದ್ಧ ಇದೀಗ ಬೀದಿಗಿಳಿಯುವ ಸಂದರ್ಭ ಬಂದಿದೆ.
ನಮ್ಮ ಹೋರಾಟದ ಮೂಲಕ ಕಾಂಗ್ರೆಸ್ ಹೈಕಮಾಂಡ್‌ಗೆ ತಕ್ಕ ಪಾಠ ಕಲಿಸುತ್ತೇವೆ. ಕೆ.ಎನ್.ರಾಜಣ್ಣರನ್ನು ಮರಳಿ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಬೇಕು. ನಾಗೇಂದ್ರ ಅವರ ಸ್ಥಾನಕ್ಕೆ ನಮ್ಮದೆ ಸಮುದಾಯದವರನ್ನು ಸಚಿವರನ್ನಾಗಿ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ದೊಡ್ಡ ಹಾನಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.





