ಮೈಸೂರು: ನಾನು ಭ್ರಷ್ಟಾಚಾರ ಮಾಡಿರೋದನ್ನು ಸಾಬೀತು ಮಾಡಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಶಾಸಕ ಯತ್ನಾಳ್‌ಗೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಬಹಿರಂಗ ಸವಾಲು ಹಾಕಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ ಅವರು, ಮುಡಾದ ಭ್ರಷ್ಟಾಚಾರದಲ್ಲಿ ತಮ್ಮ ಪಾತ್ರವೂ ಇದೇ ಎಂಬ ಶಾಸಕ ಯತ್ನಾಳ್ ಹೇಳಿಕೆಗೆ ಕೆರಳಿ ಕೆಂಡವಾದರು. ಈ ವೇಳೆ ಯತ್ನಾಳ್‌ಗೆ ಏಕವಚನದಲ್ಲೇ ಬಹಿರಂಗ ಸವಾಲು ಹಾಕಿದರು.
ನನ್ನ ಯೋಗ್ಯತೆ, ನನ್ನ ಆಸ್ತಿ ಲೆಕ್ಕ ನಿನಗೇನು ಗೊತ್ತು? ನಿನಗೆ ತಾಕತ್ ಇದ್ದರೆ ನಿನ್ನ ಬಳಿ ನನ್ನದೇನಿದೆ ಎಂಬುದನ್ನು ಬಹಿರಂಗಪಡಿಸು. ನಿನ್ನ ವಿಚಾರವು ನನಗೆ ಗೊತ್ತಿದೆ. ನಾನು ಬಹಿರಂಗಪಡಿಸುತ್ತೇನೆ. ನಾನು ಭ್ರಷ್ಟಾಚಾರ ಮಾಡಿರೋದನ್ನು ನೀನು ಸಾಬೀತು ಮಾಡಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಸವಾಲು ಹಾಕಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ನಾನು ಶಾಸಕನಾಗಿ ಬಂದಾಗ ಇದ್ದ ಆಸ್ತಿಗೂ, ಇವತ್ತಿನ ಆಸ್ತಿಗೂ ಏನು ವ್ಯತ್ಯಾಸ ಇದೆ ಅನ್ನೋದನ್ನು ನೀನು ತೆಗಿ. ಸೌಹಾರ್ಧ ಬ್ಯಾಂಕಿನ ಹೆಸರಿನಲ್ಲಿ ಹಣ ಡೆಪಾಸಿಟ್ ಮಾಡಿಸಿಕೊಂಡು, ಅದನ್ನು ಎಲ್ಲಿಗೆ ಹೂಡಿಕೆ ಮಾಡಿದ್ಯಾ ಎಂಬುದು ನನಗೆ ಗೊತ್ತಿಲ್ವ? ಎಲ್ಲದನ್ನೂ ತೆಗಿಬೇಕಾ? ಎಂದು ಶಾಸಕ ಯತ್ನಾಳ್ ವಿರುದ್ಧ ಕೆಂಡಾಮಂಡಲರಾದರು.