ಮೈಸೂರು: ಪಡುವಾರಹಳ್ಳಿಯ ಮಹಾರಾಣಿ ಪದವಿ ಕಾಲೇಜು ಬಳಿ ಇಂದಿರಾ ಕ್ಯಾಂಟೀನ್ ಪ್ರಾರಂಭವಾಗಿದ್ದು, ವಿದ್ಯಾರ್ಥಿನಿಯರು ಖುಷಿ ಖುಷಿಯಿಂದಲೇ ತಿಂಡಿ ಹಾಗೂ ಊಟ ಸವಿಯುತ್ತಿದ್ದಾರೆ.
ಇತ್ತೀಚೆಗೆ ಸ್ಥಳೀಯ ಶಾಸಕ ಹರೀಶ್ ಗೌಡ ಅವರು ಇಂದಿರಾ ಕ್ಯಾಂಟೀನ್‌ನ್ನು ಲೋಕಾರ್ಪಣೆಗೊಳಿಸಿದ್ದು, ಇದರಿಂದ ಗ್ರಾಮೀಣ ಭಾಗದಿಂದ ಬರುವ ನೂರಾರು ವಿದ್ಯಾರ್ಥಿನಿಯರ ಹಸಿವು ನೀಗಿಸುವಂತಾಗಿದೆ.
ಮುಂಜಾನೆ ತಿಂಡಿ ತಿನ್ನದೆ ಬರುವ ಎಷ್ಟೋ ಮಕ್ಕಳಿಗೆ ಈ ಕ್ಯಾಂಟೀನ್‌ನಲ್ಲಿ ಬೆಳಗಿನ ತಿಂಡಿ, ಮಧ್ಯಾಹ್ನ ಊಟದ ವ್ಯವಸ್ಥೆಯಿದ್ದು, ಕೇವಲ 5 ರೂಗೆ ತಿಂಡಿ ಹಾಗೂ 10 ರೂಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ಇಂದಿರಾ ಕ್ಯಾಂಟೀನ್ ಆರಂಭಕ್ಕೂ ಮುನ್ನ ವಿದ್ಯಾರ್ಥಿನಿಯರು ಹೆಚ್ಚು ಹೆಚ್ಚು ಹಣ ಕೊಟ್ಟು ಕಾಲೇಜಿನ ಅಕ್ಕಪಕ್ಕದ ಹೋಟೆಲ್‌ಗಳಿಗೆ ಹೋಗುತ್ತಿದ್ದರು. ಇನ್ನೂ ಕೆಲ ವಿದ್ಯಾರ್ಥಿನಿಯರು
ಮನೆಯಿಂದ ಊಟದ ಬಾಕ್ಸ್ ತಂದು ಮಧ್ಯಾಹ್ನದ ಊಟ ಮಾಡುತ್ತಿದ್ದರು. ಆದರೆ ಈಗ ಅಗ್ಗದ ದರದಲ್ಲಿ ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟ ಸವಿದು ಖುಷಿ ಪಡುತ್ತಿದ್ದಾರೆ.
ಇನ್ನು ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗ್ಗೆ 7.30 ರಿಂದ 10 ಗಂಟೆವರಗೆ ಬೆಳಿಗ್ಗೆ ತಿಂಡಿ ಮತ್ತು ಮಧ್ಯಾಹ್ನ 12 ಗಂಟೆಯಿಂದ 3 ಗಂಟೆವರೆಗೆ ಮಧ್ಯಾಹ್ನದ ಊಟ ವಿತರಿಸಲಾಗುತ್ತದೆ.
ಈ ಬಗ್ಗೆ ಮಾತನಾಡಿರುವ ಊಟ ತಯಾರಕರು, ನಾವು ಈ ಕ್ಯಾಂಟೀನ್‌ನಲ್ಲಿ ಗುಣಮಟ್ಟದ ತಿಂಡಿ ಹಾಗೂ ಊಟ ನೀಡುತ್ತಿದ್ದೇವೆ. ಮೊನ್ನೆ ತಾನೆ ಕ್ಯಾಂಟೀನ್ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿಗೆ ಬರುವ ಭರವಸೆ ಇದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.





