ಮೈಸೂರು: ಮತಗಳ್ಳತನ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಭೆ ಮಾಡಿದ್ದು, ಈ ಬಗ್ಗೆ ದೇಶದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವ ಕ್ಷೇತ್ರದಲ್ಲಿ ಹೆಚ್ಚು ಮತಗಳ್ಳತನ ಆಗಿದೆ. ಅದು ಯಾವ ಜಿಲ್ಲೆಯಲ್ಲಿ ಎಂಬುದರ ಬಗ್ಗೆ ನನಗೆ ಅಷ್ಟು ಮಾಹಿತಿ ಇಲ್ಲ. ಪಾರ್ಲಿಮೆಂಟ್ ಚುನಾವಣೆ ಆದಮೇಲೆ ಮಹಾರಾಷ್ಟ್ರದಲ್ಲಿ 41 ಲಕ್ಷ ವೋಟ್ ಜಾಸ್ತಿಯಾಗಿದೆ. ಬಿಹಾರದಲ್ಲಿ 61 ಲಕ್ಷ ವೋಟ್ ಕಡಿಮೆ ಆಗಿದೆ ಇದರರ್ಥ ಏನು? ಎಂದು ಪ್ರಶ್ನೆ ಮಾಡಿದರು. ಮತಗಳ್ಳತನ ಆಗಿದೆ ಎಂದು ನನಗೆ ಅನ್ನಿಸುತ್ತಿದೆ. 4% ವೋಟ್ ಕಡಿಮೆ ಜಾಸ್ತಿ ಆದ್ರೆ, ಇದಕ್ಕೆ ಚುನಾವಣಾ ಆಯೋಗ ಕಾರಣ ಕೊಡಬೇಕು. ಇದನ್ನು ಮುಚ್ಚಿ ಹಾಕಿಕೊಂಡು, ತಳ್ಳಿಹಾಕಿಕೊಂಡು ಹೋದರೆ ಏನರ್ಥ?. ಇದು ಎಲ್ಲರ ಮೂಲಭೂತ ಹಕ್ಕು. ಚುನಾವಣೆ ಗೆಲ್ಲೋದು ಪ್ರಚಾರ ಮಾಡೋದು ಅಷ್ಟೇನಾ ಕೇಂದ್ರ ಸರ್ಕಾರದ ಕೆಲಸ? ಬಿಹಾರದಲ್ಲಿ 70 ಸಾವಿರ ಕೋಟಿ ಮಿಸ್ಸಿಂಗ್ ಆಗಿದೆ ಎಂದು ವರದಿಯಾಗಿದೆ. ಇದರ ಬಗ್ಗೆ ಚರ್ಚೆ ಮಾಡೋದು ಬೇಡ್ವಾ? ಕಳೆದ 10 ವರ್ಷದಲ್ಲಿ ಬಿಹಾರದಲ್ಲಿ 150 ಬ್ರಿಡ್ಜ್ ಬಿದ್ದಿದೆ.
ಪ್ರಧಾನಿ ಇದನ್ನು ಬಿಟ್ಟು ಪಾಕಿಸ್ತಾನ, ಮುಸ್ಲಿಂ ಅಂತಾ ವೋಟ್ ಕೇಳ್ತಾರೆ. ಮೋಸ ಮಾಡಿ ಬಿಜೆಪಿಗೆ ಇಷ್ಟು ವೋಟ್ ಬಿದ್ದಿವೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಯುಪಿಎ ಸರ್ಕಾರ ಇದ್ದಾಗ ಅಕ್ರಮ 80 ಲಕ್ಷ ಬಾಂಗ್ಲಾದೇಶ ವಲಸಿಗರನ್ನು ವಾಪಸ್ ಕಳುಹಿಸಿದ್ದೇವೆ. ಬಿಜೆಪಿ ಸರ್ಕಾರ ಎಷ್ಟು ಜನರನ್ನು ಕಳುಹಿಸಿದೆ. ಬರೀ ಸುಳ್ಳು ಹೇಳೋದು,
ಪ್ರಚಾರ ಪಡಿಯೋದು. ಟಿವಿ ಟಿವಿ ಟಿವಿ ಇದೇ ಮೋದಿ ಮಾಡಿರೋದು. ಇವರ ಭಾಷಣವನ್ನು ಮಾತ್ರ ಜನ ಕೇಳ್ಬೇಕು. ಆದರೆ ಇವರಿಗೆ ಯಾರು ಪ್ರಶ್ನೆ ಕೇಳಬಾರದು. ಇದು ಬಿಜೆಪಿ ಮನಸ್ಥಿತಿ. ಮೋದಿಗೆ ಧೈರ್ಯವಿದ್ದರೆ ಒಂದು ಪತ್ರಿಕಾಗೋಷ್ಠಿ ಮಾಡಲಿ. ದೇಶದ ಸಾಲ ಜಾಸ್ತಿಯಾಗಿದೆ. ಡೀಸೆಲ್ ಪೆಟ್ರೋಲ್ ಬೆಲೆ ಜಾಸ್ತಿಯಾಗಿದೆ. ಅದರ ಬಗ್ಗೆ ಬಿಜೆಪಿ ಪ್ರತಿಭಟನೆ ಮಾಡಲಿ. ಅದನ್ನು ಬಿಟ್ಟು ರಾಹುಲ್ ಗಾಂಧಿ ವಿರುದ್ಧ ಏನು ಪ್ರತಿಭಟನೆ ಮಾಡುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.





