ಮೈಸೂರು: ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ ಪಕ್ಷ ಸೇರುವುದಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಚಾಮುಂಡಿ ತಾಯಿಗೆ ಅವಮಾನಿಸಿ ಮಹಿಷ ದಸರಾ ಮಾಡಲು ಮುಂದಾಗಿದ್ದರು. ಅಂದು ಕೂಡ ಅದನ್ನು ವಿರೋಧ ಮಾಡಿದ್ದು, ಮಹಿಷ ದಸರಾ ಮಟ್ಟ ಹಾಕಿದ್ದು ನಾನು. ಅರಮನೆ ಕೂಡ ಅದರ ಬಗ್ಗೆ ಚಕಾರ ಎತ್ತಲಿಲ್ಲ. ಪ್ರತಾಪ್ ಸಿಂಹ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗುವ ಅನಿವಾರ್ಯತೆ ಇಲ್ಲ. ನನ್ನ ತಂದೆ ಕೂಡ ಜನಸಂಘದಿಂದ ಬಂದಿರೋರು. ನಾನು ಕಾಂಗ್ರೆಸ್‌ಗೆ ಹೋಗಬೇಕು ಅಂತಿದ್ರೆ ಚುನಾವಣೆ ಸಮಯದಲ್ಲೇ ಹೋಗ್ತಿದ್ದೆ. ಟಿಕೆಟ್ ಕೊಡ್ತೀವಿ ಬನ್ನಿ ಅಂತ ಸಾಕಷ್ಟು ಜನ ಕರೆದ್ರು ಅಂತಹ ಸಮಯದಲ್ಲೇ ಹೋಗಲಿಲ್ಲ ಎಂದು ಹೇಳಿದರು.
ಇನ್ನು ವಿ.ಸೋಮಣ್ಣ ವರುಣದಲ್ಲಿ ಚುನಾವಣೆ ನಿಂತಾಗ ಸಿದ್ದರಾಮಯ್ಯ ವಿರುದ್ಧ ಕೆಲಸ ಮಾಡಿದವನು ನಾನು. ನನ್ನ ಮೇಲೆ ಸಾಕಷ್ಟು ಕೇಸ್ ಹಾಕಿಸಿದ್ರು. ಈಗಲೂ ಸಹ ಕೇಸ್ ಹಾಕಿಸಿದ್ದಾರೆ. ನಾನು ಬದ್ಧತೆಯಿರುವ ವ್ಯಕ್ತಿ. ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷದ ಕೆಲವರು ಬಕೆಟ್ ಹಿಡಿಯುತ್ತಿದ್ದಾರೆ ಎಂದು ಹೇಳಿದ್ದಾರೆ. ಮಾತು ಸಭ್ಯತೆ ಮೀರಬಾರದು ಎಂದು ಸ್ವಪಕ್ಷದ ನಾಯಕರ ಹೇಳಿಕೆಗೆ ಕಿಡಿಕಾರಿದರು.