ಮೈಸೂರು: ಎಂಎಲ್‌ಸಿ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೇಕ್ ಎನ್‌ಕೌಂಟರ್ ಮಾಡಲು ಯತ್ನಿಸಿದ್ದರು ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ಸುಳ್ಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು(ಡಿಸೆಂಬರ್.23) ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರು ನೀಡಿರುವ ಆಕ್ಷೇಪಾರ್ಹ ಹೇಳಿಕೆ ವಿಚಾರದಲ್ಲಿ ಬಿಜೆಪಿ ಪಕ್ಷದಲ್ಲಿರುವರೆಲ್ಲರೂ ಹೇಳುತ್ತಿರುವುದೆಲ್ಲಾ ಸುಳ್ಳು. ಅಂತೆಯೇ ಪ್ರಹ್ಲಾದ್ ಜೋಶಿ ಸಹ ಸುಳ್ಳು ಹೇಳುತ್ತಿದ್ದಾರೆ. ತಪ್ಪು ಮಾಡಿದವರು ಮಾತ್ರ ಸುಳ್ಳು ಹುಡುಕುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಇದೇ ಸಂದರ್ಭದಲ್ಲಿ,ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಬೆಜೆಪಿ ಪಕ್ಷ ಬೌದ್ಧಿಕವಾಗಿ ದಿವಾಳಿಯಾಗಿರುವುದನ್ನು ಸಾಬೀತುಪಡಿಸುತ್ತದೆ. ಅಲ್ಲದೇ ಕೇಂದ್ರ ಬಿಜೆಪಿ ಪಕ್ಷವೂ ಮನುಸ್ಮೃತಿಯ ಸರ್ಕಾರ ನಡೆಸಲು ಪ್ರಯತ್ನಿಸುತ್ತಿದ್ದು, ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ಬದಲಾಯಿಸಲು ಹುನ್ನಾರ ಮಾಡಿಕೊಂಡಿದೆ. ಹೀಗಾಗಿ ಆ ಮಹಾನಾಯಕನ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯನ್ನು ಬಿಜೆಪಿ ಪಕ್ಷದ ನಾಯಕರು ಉಳಿಸಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಪಕ್ಷ ಕಳೆದ 11 ವರ್ಷಗಳಿಂದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿಯೇ ನಡೆದುಕೊಂಡಿದೆ. ಆದರೆ ಅಂಬೇಡ್ಕರ್ ವಿಚಾರದಲ್ಲಿ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದೆ. ನಮ್ಮ ಪಕ್ಷದ ಮೇಲೆ ಬಿಜೆಪಿಯೂ ಮಾಡುತ್ತಿರುವ ಈ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ