ಮೈಸೂರು : ಇಂದಿನ ಯುವ ಪೀಳಿಗೆಗೆ ದೇಶದ ನೈಜ ಇತಿಹಾಸವನ್ನು ತಿಳಿಸುವ ಪ್ರಯತ್ನ ಮಾಡದಿದ್ದರೆ ಸ್ವಾತಂತ್ರ್ಯದ ಉದ್ದೇಶ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ಗಂಡಾಂತರ ತಪ್ಪಿದ್ದಲ್ಲ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಕಳವಳ ವ್ಯಕ್ತಪಡಿಸಿದರು.
ನಗರದ ಅಂಧ ಮಕ್ಕಳ ಸರಕಾರಿ ಪಾಠಶಾಲೆಯ ಆವರಣದಲ್ಲಿ ಶ್ರೀ ಗಣೇಶ್ ಕಲ್ಚರ್ ಅಂಡ್ ಎಜುಕೇಷನ್ ಟ್ರಸ್ಟ್ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವಿವಿಧ ಕ್ಷೇತ್ರದ ಗಣ್ಯರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ, ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಮತ್ತು ಡಿಜಿಟಲ್ ಯುಗದಲ್ಲಿ ಆಧುನಿಕ ಶಿಕ್ಷಣದ ಕಡೆಗೆ ಆಸಕ್ತಿ ತೋರುತ್ತಿರುವ ಯುವ ಸಮ್ಮೂಹ ದೇಶದ ನೈಜ ಇತಿಹಾಸವನ್ನು ಓದುಕೊಳ್ಳುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ಯುವಕರಲ್ಲಿ ದೇಶ ಪ್ರೇಮ ಕ್ಷೀಣಿಸುತ್ತಿದೆ. ನಮಗೆ ಸ್ವಾತಂತ್ರ್ಯ ತಂದುಕೊಟ್ಟ ನಾಯಕರನ್ನು ಮರೆಯುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಈ ದೇಶ ಹೇಗಿತ್ತು, ಈಗ ಹೇಗಿದೆ ಎಂಬ ಕಲ್ಪನೆಯೂ ಇಲ್ಲ. ಗಾಂಧಿಜೀ, ಜವಹರಲಾಲ್ ನೆಹರು, ಬಾಲ ಗಂಗಾಧರ ತಿಲಕ್, ಸರೋಜಿನಿ ನಾಯ್ಡು, ಸುಭಾಷ್ ಚಂದ್ರ ಬೋಸ್, ಚಂದ್ರ ಶೇಖರ್ ಅಜಾದ್, ಸರ್ದಾರ್ ವಲ್ಲಾಬಾಯಿ ಪಟೇಲ್ ಅವರ ಹೋರಾಟ ಮತ್ತು ಕೊಡುಗೆಗಳ ಬಗ್ಗೆ ಅರಿವಿಲ್ಲ. ಕೇವಲ ಮೊಬೈಲ್, ಮದ್ಯ, ಮಾದಕತೆ, ಮನರಂಜನೆಗಳಲ್ಲಿ ಮೈಮರೆತಿದ್ದಾರೆ ಎಂದು ವಿಷಾಧಿಸಿದರು.
ರಾಜ್ಯ ಸಂಪನ್ಮೂಲ ವ್ಯಕ್ತಿ ಬಿ. ಬಾಲಕೃಷ್ಣಯ್ಯ ಮಾತನಾಡಿ, ಇಂದಿನ ಮಕ್ಕಳು ಮೊಬೈಲ್‍ಗೆ ಮಾರು ಹೋಗಲು ಪೋಷಕರೇ ಕಾರಣ. ತಂದೆ ತಾಯಿಗಳು ತಮ್ಮ ಕೈಯಲ್ಲಿ ಪುಸ್ತಕ ಹಿಡಿದುಕೊಂಡರೆ ಮಕ್ಕಳೂ ಪುಸ್ತಕ ಹಿಡಿದುಕೊಳ್ಳುತ್ತಾರೆ. ಪೋಷಕರು ಮೊಬೈಲ್ ಹಿಡಿದುಕೊಂಡರೆ ಮಕ್ಕಳೂ ಮೊಬೈಲ್ ಹಿಡಿದುಕೊಳ್ಳುತ್ತಾರೆ. ನಾವು ಮನೆಯಲ್ಲಿ ಮಕ್ಕಳ ಮುಂದೆ ಹೇಗೆ ಇರುತ್ತೇವೆ, ಏನು ಮಾಡುತ್ತೇವೆ, ಏನನ್ನು ಮಾತನಾಡುತ್ತೇವೆ ಎಂಬ ಬಗ್ಗೆ ಜಾಗೃತಿ ವಹಿಸಬೇಕೆಂದು ಕಿವಿಮಾತು ಹೇಳಿದರು.
ಮಾಜಿ ಸೈನಿಕ ಕಿಶೋರ್ ಕದಂ ಮಾತನಾಡಿ, ದೇಶ ಕಾಯುವ ಸೈನಿಕರಿಗೆ ಹೊರಗಿನ ಶತ್ರುಗಳನ್ನು ಎದುರಿಸುವ ಸಾಮಥ್ರ್ಯವಿದೆ. ಆದರೆ, ದೇಶದೊಳಗಿನ ಶತ್ರುಗಳನ್ನು ಎದುರಿಸಲು ಕಷ್ಟವಾಗುತ್ತಿದೆ. ಇತ್ತೀಚೆಗೆ ಸೈನಿಕರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಅದರೆ, ತಮ್ಮ ಇಡೀ ಕುಟುಂಬವನ್ನು ಬಿಟ್ಟು ದೇಶ ಕಾಯುವ ಸೈನಿಕರ ಬದುಕು ಹೇಗಿರುತ್ತದೆ ಎಂದು ಟೀಕಾಕಾರರಿಗೆ ಗೊತ್ತಿಲ್ಲ ಎಂದು ನೊಂದು ನುಡಿದರು.
ನಂತರ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಹೆಚ್.ಎಸ್. ಯೋಗಣ್ಣ, ಮಾಜಿ ಸೈನಿಕರಾದ ಸಿ.ಕೆ.ಸತೀಶ್, ಡಾ. ನಳಿನಿ ತಮ್ಮಯ್ಯ, ಜಯಶ್ರೀ ಶಿವರಾಂ, ಯು ಹಿನ್ನಲ್ಲೆ ಗಾಯಕ ಸುಮಂತ್ ವಷಿಷ್ಠ, ರಾಮಚಂದ್ರ ಹೆಗಡೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಲ್ಲದೆ, ಎಸ್‍ಎಸ್‍ಎಲ್‍ಸಿಯಲ್ಲಿ ಪಾಸಾದ ಅಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಂತರ ಲಿಟಲ್ ಸ್ಟಾರ್ ಕಿಂಡರ್ ಗಾರ್ಡನ್ ಮಕ್ಕಳಿಂದ ದೇಶಭಕ್ತಿ ಸಾರುವ ನೃತ, ಗಾಯನವಿತ್ತು. ಕಾರ್ಯಕ್ರಮದಲ್ಲಿ ಜಿ.ಬಿ. ಸರಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ತಿಮ್ಮಾಚಾರಿ, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಬಿ. ನಟರಾಜ್, ಅಂಧ ಮಕ್ಕಳ ಸರಕಾರಿ ಶಾಲೆಯ ಅಧೀಕ್ಷಕ ಸತೀಶ್ ಕ್ಯಾತನಹಳ್ಳಿ, ರಂಗನಾಥ್, ಟ್ರಸ್ಟಿನ ಸಂಸ್ಥಾಪಕಿ ಶೋಭಾರಾಣಿ, ಕೇಶವಮೂರ್ತಿ, ಲಕ್ಷ್ಮೀಶ, ಸತ್ಯಮೂರ್ತಿ ಮೊದಲಾದವರು ಹಾಜರಿದ್ದರು.





