ಮೈಸೂರು : ಫೇಸ್‌ಬುಕ್‌ನಲ್ಲಿ ಪರಿಚಿತವಾದ ಅಪರಿಚಿತ ಮಹಿಳೆಯ ಮೂಲಕ ಷೇರು ಮಾರುಕಟ್ಟೆಗೆ ಹಣ ಹೂಡಿಕೆ ಮಾಡಿದ ವ್ಯಕ್ತಿಯೊಬ್ಬರು 27,29 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ.
ವಿಜಯನಗರ ನಿವಾಸಿಯೊಬ್ಬರು ಫೇಸ್ ಬುಕ್ ವೀಕ್ಷಿಸುತ್ತಿದ್ದ ವೇಳೆ ಅಲ್ಲಿ ಮಹಿಳೆಯ ಭಾವಚಿತ್ರ ಗಮನಿಸಿ ಆಕೆಯ ಮೊಬೈಲ್ ಸಂಖ್ಯೆ ಪಡೆದು ಪರಿಚಯ ಮಾಡಿಕೊಂಡಿದ್ದಾರೆ. ನಂತರ ಆಕೆ ಷೇರು ಮಾರುಕಟ್ಟೆ ಬಗ್ಗೆ ಹೇಳಿದ್ದಾಳೆ.
ನೀವು ಹಣ ಹೂಡಿಕೆ ಮಾಡಿದಲ್ಲಿ ಹಣವನ್ನು ಹತ್ತುಪಟ್ಟು ಹೆಚ್ಚು ಮಾಡಬಹುದು ಎಂದು ನಂಬಿಸಿದ್ದಾಳೆ. ಆಕೆಯ ಮಾತನ್ನು ನಂಬಿ ಹಂತ ಹಂತವಾಗಿ 27,29,193ರೂ. ಹಣವನ್ನು ಅವರು ಹೇಳಿದ ಖಾತೆಗೆ ಜಮೆ ಮಾಡಿದ್ದಾರೆ. ನಂತರ ಅವರಿಗೆ ಯಾವ ಲಾಭವೂ ಬಂದಿಲ್ಲ. ಕೊಟ್ಟ ಹಣ ಕೂಡ ವಾಪಸ್ ಬಂದಿಲ್ಲ. ಹೀಗಾಗಿ ಅವರು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಡಿತರ ಅಕ್ಕಿ-ರಾಗಿ ಅಕ್ರಮ ಸಾಗಣೆ : ವಶ
ಮೈಸೂರು : ಪಡಿತರವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆಟೋ ಮೇಲೆ ದಾಳಿ ನಡೆಸಿರುವ ಆಹಾರ ಇಲಾಖೆ ಅಧಿಕಾರಿಗಳು ೧೦ ಚೀಲ ಅಕ್ಕಿ ಹಾಗೂ ಒಂದು ಚೀಲ ರಾಗಿಯನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಜೆಎಸ್‌ಎಸ್ ಕಾಲೇಜಿನ ಎಲೆತೋಟದ ಬಳಿ ಪಡಿತರವನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಆಹಾರ ನಿರೀಕ್ಷಕ ಲಿಖಿತ್ ಪ್ರಸಾದ್‌ಗೆ ಬಂದಿದೆ. ನ.೩೦ರ ಸಂಜೆ ಕೃಷ್ಣರಾಜ ಠಾಣೆಯ ಪೊಲೀಸರ ಸಹಾಯದೊಂದಿಗೆ ದಾಳಿ ನಡೆಸಲಾಗಿದೆ.
ಈ ವೇಳೆ ಪ್ಯಾಸೆಂಜರ್ ಆಟೋವನ್ನು ತಡೆದು ನಿಲ್ಲಿಸಿದ್ದಾರೆ. ಪೊಲೀಸರನ್ನು ಕಂಡೊಡನೆ ಆಟೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಅಕ್ಕಿ ಹಾಗೂ ರಾಗಿಯನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.





