ಮೈಸೂರು: ಎಂಎಲ್‌ಸಿ ಮಂಜೇಗೌಡರೂ ಕೂಡ ಮೂಡಾ (MUDA)ದಲ್ಲಿ ಅಕ್ರಮ ನಿವೇಶನ ಪಡೆದಿದ್ದಾರೆ ಎಂದು ಜಾರಿ ನಿರ್ದೇಶಾನಾಲಯ (ಇಡಿ) ಹೇಳುತ್ತಿದೆ. ತಾಕತ್ತಿದ್ದರೆ ಅವರ ಮೇಲೂ ದೂರು ದಾಖಲಿಸಿ ಎಂದು ಸ್ನೇಹಮಯಿ ಕೃಷ್ಣಗೆ ಕಾಂಗ್ರೆಸ್ ಜಿಲ್ಲಾ ವಕ್ತಾರ ರಾಜೇಶ್ ಸವಾಲು ಹಾಕಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇರದ ಸಿಎಂ ಸಿದ್ದರಾಮಯ್ಯ ಅವರ ಮೇಲೆ ರಾಜಕೀಯ ಷಡ್ಯಂತ್ರ ನಡೆಸಿ ಮುಡಾ ಪ್ರಕರಣದಲ್ಲಿ ದೂರು ದಾಖಲಿಸಿದ್ದಾರೆ. ಸಿದ್ದರಾಮಯ್ಯ ಅವರ ಪರ ಮಾತನಾಡಿದ ಜಿಟಿ ದೇವೆಗೌಡರು ಮೇಲೂ ದೂರು ದಾಖಲಿಸಿ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದೆಲ್ಲಾ ಕುಮಾರಸ್ವಾಮಿ ಅವರ ಪಿತೂರಿಯಿಂದ ನಡೆಯುತ್ತಿದೆ ಎಂದು ಹೇಳಿದರು.
ಈಗ ಎಂಎಲ್‌ಸಿ ಮಂಜೇಗೌಡರೂ ಮುಡಾ ಅಕ್ರಮ ನಿವೇಶನದಲ್ಲಿ ಭಾಗಿಯಾಗಿದ್ದಾರೆ ಎಂದು ಇಡಿ ಹೇಳುತ್ತಿದೆ. ಸಾಮಾಜಿಕ ಕಳಕಳಿ ಇದ್ದರೆ ಅವರ ಮೇಲೂ ದೂರು ದಾಖಲಿಸಿ. ಅವರ ವಿರುದ್ಧವೂ ಹೋರಾಟ ಮಾಡಿ. ಸಿದ್ದರಾಮಯ್ಯ ಅವರನ್ನೇ ಯಾಕೆ ಟಾರ್ಗೆಟ್ ಮಾಡಿ ಕಟ್ಟಿ ಹಾಕುವ ಷಡ್ಯಂತ್ರ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.
ಎಚ್‌ಡಿ ಕುಮಾರಸ್ವಾಮಿ ಅವರು ಬಿಡದಿ ಬಳಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ ವಿಚಾರಕ್ಕೆ ಕೋರ್ಟ್ ಅವರಿಗೆ ಛೀಮಾರಿ ಹಾಕಿದೆ. ನೀವೆ ಅಕ್ರಮದಲ್ಲಿ ಭಾಗಿಯಾಗಿ ಇನ್ನೊಬ್ಬರ ಮೇಲೆ ಯಾವ ನೈತಿಕತೆ ಇಟ್ಟುಕೊಂಡು ಆರೋಪ ಮಾಡುತ್ತೀರಿ? ಎಂದು ಸ್ನೇಹಮಯಿ ಕೃಷ್ಣ ವಿರುದ್ಧ ರಾಜೇಶ ಕಿಡಿಕಾರಿದರು.