ಎಚ್.ಎಸ್.ದಿನೇಶ್ ಕುಮಾರ್
ಮೈಸೂರು: ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡು ಇದುವರೆಗೂ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಭೂಮಿ ಕಳೆದುಕೊಂಡವರು ಮಂಗಳವಾರ ಕೆಐಎಡಿಬಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಚಾಮರಾಜನಗರದ ಬದನಗುಪ್ಪೆ ಸುತ್ತಮುತ್ತಲಿನಲ್ಲಿ ಜಮೀನುಗಳನ್ನು ಹತ್ತು ವರ್ಷಗಳ ಹಿಂದೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ, ಸಾಕಷ್ಟು ಜನರಿಗೆ ಇಂದಿಗೂ ಕೋಟ್ಯಾಂತರ ರೂ. ಪರಿಹಾರ ವಿತರಣೆಯಾಗಿಲ್ಲ ಎಂದು ರೈತರು ಗಂಭೀರ ಆರೋಪ ಮಾಡಿದರು.
ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದ್ದರೂ ಅಧಿಕಾರಿಗಳು ಮಾತ್ರ ಕ್ಯಾರೇ ಎಂದಿಲ್ಲ. ಈ ಹಿನ್ನೆಲೆಯಲ್ಲಿ ಬದನಗುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲೇಶ್ ನೇತೃತ್ವದಲ್ಲಿ ಪರಿಹಾರ ಪಡೆಯಬೇಕಾಗಿರುವ ಪುಟ್ಟನಂಜಮ್ಮ, ಪುಟ್ಟತಾಯಮ್ಮ, ಬಸವನಾಯಕ, ಮಹದೇವನಾಯಕ ಅವರುಗಳು ನಮಗೆ ಹಣ ನೀಡುವಂತೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಈ ವೇಳೆ ಮಾತನಾಡಿದ ಮಲ್ಲೇಶ್ ಅವರು, ಪುಟ್ಟನಂಜಮ್ಮ ಅವರಿಗೆ ೧.೪೫ ಕೋಟಿ ರೂ, ಪುಟ್ಟತಾಯಮ್ಮ, ಮಹದೇವನಾಯಕ, ಬಸವನಾಯಕ ಅವರಿಗೆ ೧.೦೬ ಕೋಟಿ ರೂ. ಪರಿಹಾರ ಬಾಕಿ ಇದೆ. ಇದರ ಜೊತೆಗೆ ಇನ್ನೂ ಅನೇಕರಿಗೆ ಪರಿಹಾರ ವಿತರಣೆ ಆಗಿಲ್ಲ ಎಂದು ಆರೋಪಿಸಿದರು.
ನಂತರ ಅವರುಗಳು ಕೆಐಎಡಿಬಿ ಅಧಿಕಾರಿಗಳನ್ನು ಭೇಟಿಯಾಗಿ ಹಣ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಹಣದ ಚೆಕ್ ನೀಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಅಂತಿಮವಾಗಿ ಬುಧವಾರ ಚೆಕ್ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ವಾಪಸ್ ಪಡೆದರು.
ಆಚೆ ಕಳುಹಿಸಿ; ಇದು ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ ಎನ್.ಸಿ.ವೆಂಕಟರಾಜು ಅವರ ಅಣಿಮುತ್ತು. ರೈತರಿಗೆ ನೀಡಬೇಕಾದ ಪರಿಹಾರದ ಹಣ ನೀಡದ ಬಗ್ಗೆ ವರದಿ ಮಾಡಲು ತೆರಳಿದ್ದ ಮಾಧ್ಯಮದವರನ್ನು ಗಮನಿಸಿದ ಅವರು, ಅವರೇಕೆ ಇಲ್ಲಿ ಬಂದಿದ್ದಾರೆ. ಅವರನ್ನು ಆಚೆ ಕಳುಹಿಸಿ ಎಂದು ತಮ್ಮ ಸಿಬ್ಬಂದಿಗೆ ಸೂಚನೆ ನೀಡಿದರು. ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದ ರೈತರು ಅವರಿಗೆ ನಾವೇ ವಿಷಯ ತಿಳಿಸಿದ್ದು, ಮೊದಲು ಪರಿಹಾರ ನೀಡಿ ನಂತರ ಬೇರೆಯದ್ದು ಮಾತನಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.