Mysore
27
clear sky

Social Media

ಗುರುವಾರ, 22 ಜನವರಿ 2026
Light
Dark

ಡಿಕೆಶಿ ಸಿಎಂ ಆಗಬಾರದೆಂದು ಕುರುಬರನ್ನು ಒಂದುಗೂಡಿಸುವ ಕೆಲಸ: ಸಿದ್ದು ವಿರುದ್ಧ ಎಚ್.ವಿಶ್ವನಾಥ್‌ ವಾಗ್ದಾಳಿ

h vishvanath

ಮೈಸೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎಂದು ಬಹಳ ಒತ್ತಾಯವಿದೆ.‌ ಅದಕ್ಕಾಗಿ ಸಿಎಂ ಸಿದ್ದರಾಮಯ್ಯ ಕುರುಬರನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಕಿಡಿಕಾರಿದ್ದಾರೆ.

ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂಎಲ್‌ಸಿ ಎಚ್.ವಿಶ್ವನಾಥ್‌ ಅವರು, ಸಿದ್ದರಾಮಯ್ಯಗೆ ಈಗ ಸಂಕಷ್ಟ ಎದುರಾಗಿದೆ. ಅದಕ್ಕಾಗಿ ಕುರುಬರನ್ನು ಜೊತೆಗೂಡಿಸಲು ಹುನ್ನಾರ ನಡೆಸುತ್ತಿದ್ದಾರೆ. ಸಿದ್ದರಾಮಯ್ಯಗೆ ಆಸಕ್ತಿ ಇದ್ದರೆ ಮೊದಲೇ ಕ್ಯಾಬಿನೆಟ್‌ನಲ್ಲಿ ಇಟ್ಟು ಪಾಸ್ ಮಾಡಬೇಕಿತ್ತು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಇದನ್ನು ಶಿಫಾರಸ್ಸು ಮಾಡಿದ್ದರು. ಸಿದ್ದರಾಮಯ್ಯ ಸರ್ಕಾರ ಕುಲಶಾಸ್ತ್ರ ಅಧ್ಯಯನವನ್ನು ಕೇಂದ್ರಕ್ಕೆ ಕಳುಹಿಸಿದೆ. ಆದರೆ ಅದು ಕಾನೂನು ಪ್ರಕಾರ ಸರಿಯಾದ ಕ್ರಮದಲ್ಲಿ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನು ಓದಿ : ವಿಜಯಲಕ್ಷ್ಮೀ ಮನೆಯಲ್ಲಿ 3 ಲಕ್ಷ ಕಳ್ಳತನ ಪ್ರಕರಣ: ಮನೆ ಕೆಲಸದವರ ವಿಚಾರಣೆ

ಇನ್ನು ಡಿ.ಕೆ.ಶಿವಕುಮಾರ್‌ ಸಿಎಂ ಆಗಬೇಕು ಎಂದು ಬಹಳ ಒತ್ತಾಯವಿದೆ. ಅದಕ್ಕಾಗಿ ಸಿಎಂ ಸಿದ್ದರಾಮಯ್ಯ ಕುರುಬರನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದ್ದಾರೆ. ತನು ಮನ ಧನ ಎಲ್ಲವೂ ಕುರುಬ ಸಮುದಾಯದಿಂದ ಅರ್ಪಣೆ ಆಗಿದೆ. ಆದರೆ ಸಮುದಾಯಕ್ಕೆ ಏನು ಮಾಡಿಲ್ಲ. ಸಮುದಾಯದಲ್ಲಿ ಯಾರನ್ನು ಬೆಳೆಸಲಿಲ್ಲ. ಕುರುಬ ಸಮುದಾಯದ ನಾಯಕತ್ವವನ್ನು ತುಳಿದಿದ್ದಾರೆ. ನನ್ನನ್ನು ಸೇರಿದಂತೆ ತುಳಿದಿದ್ದಾರೆ. ಯಾವ ಹೋರಾಟದಲ್ಲೂ ಯಾರಿಗೂ ಬೆಂಬಲ ಕೊಟ್ಟಿಲ್ಲ. ಕಷ್ಟದಲ್ಲಿದ್ದಾಗ ಸಮುದಾಯ ನಿಂತಿದೆ. ಆದರೆ ಚೆನ್ನಾಗಿರುವಾಗ ಸಿದ್ದರಾಮಯ್ಯ ಏನು ಮಾಡಲಿಲ್ಲ. ಕುರುಬರಿಗೆ, ಹಿಂದುಳಿದ ವರ್ಗಗಳಿಗೆ ದೇವರಾಜ ಅರಸು ಅವರು ಕೊಡುಗೆ ನೀಡಿದ್ದಾರೆ. ಸಿದ್ದರಾಮಯ್ಯರಿಂದ ಏನೂ ಆಗಿಲ್ಲ. ಹಿಂದುಳಿದ ವರ್ಗಕ್ಕೂ ಏನು ಮಾಡಿಲ್ಲ. ನಾಯಕ ಸಮುದಾಯವನ್ನು ಎಸ್ಟಿ ಮಾಡಿದ್ದು ದೇವೇಗೌಡರು. ಯಾವ ಹಿಂದುಳಿದ ಸಮುದಾಯಕ್ಕೂ ಏನು ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಸಿದ್ದರಾಮಯ್ಯ ಮಾತು ಕೇಳಿ ಕುರುಬ ಸಮುದಾಯದ ಸ್ವಾಮೀಜಿಗಳು ಬೀದಿಗಿಳಿಯಬಾರದು. ಒಂದು ವೇಳೆ ಬೀದಿಗೆ ಬಂದರೆ ತಲೆದಂಡವಾಗಬೇಕಾಗುತ್ತದೆ ಹುಷಾರ್ ಎಂದು ಎಚ್ಚರಿಕೆ ನೀಡಿದರು. ನಿಮ್ಮನ್ನು ಸ್ವಾಮಿ ಮಾಡಿದ್ದೂ ನಾನು. ಮೊದಲ ಪೀಠಾಧ್ಯಕ್ಷ ಆಗಿದ್ದು ನಾನು. ಆದ್ದರಿಂದ ಸಿದ್ದರಾಮಯ್ಯ ಪರ ಯಾರೂ ಕೂಡ ಬೀದಿಗೆ ಬರಬೇಡಿ. ನೀವೆಲ್ಲ ಸಿದ್ದರಾಮಯ್ಯನ ಕಾಲಾಳುಗಳಲ್ಲ. ಕುರುಬ ಸಮುದಾಯದ ಕಟ್ಟಾಳುಗಳು ನೀವು. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಪರ ಬೀದಿಗೆ ಬರಬಾರದು. ಬಂದರೆ ನಾವು ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.

ಇನ್ನು ಸಿದ್ದರಾಮಯ್ಯಗೂ ಮಠಕ್ಕೂ ಏನು ಸಂಬಂಧವೇ ಇಲ್ಲ. ಮಠ ಕಟ್ಟಿದ ಮೇಲೆ ಸಿದ್ದರಾಮಯ್ಯ ಬಂದಿದ್ದು. ಸಿದ್ದರಾಮಯ್ಯ ಕುರುಬರಿಗೆ ಶಿಕ್ಷಣವನ್ನೂ ಕೊಡಲಿಲ್ಲ. ಎಸ್ ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣರಾದವರೇ ನಿಮ್ಮ ಜೊತೆ ಇರೋದು. ಕುರುಬರ ಕತೆ ಇಂಗ್ಲಿಷ್ ಸಿನಿಮಾದಂತೆ ಆಗಿದೆ. ಭಾಷೆ ಗೊತ್ತಿಲ್ಲದೇ ಸಿಳ್ಳೆ ಹೊಡೆದಂತೆ ಇರುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

Tags:
error: Content is protected !!