ಮೈಸೂರು : ನಗರದಲ್ಲಿ ಕೋಟ್ಯಾಂತರ ರೂ. ಮೊತ್ತದ ಡ್ರಗ್ಸ್ ತಯಾರಿಕೆ ನಡೆಯುತ್ತಿದ್ದರೂ ಪತ್ತೆ ಹಚ್ಚುವಲ್ಲಿ ನಗರದ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಡ್ರಗ್ಸ್ ತಯಾರಿಸುವ ಲ್ಯಾಬ್‌ನಲ್ಲಿ ಒಟ್ಟು 10 ಕೋಟಿ ರೂ.ಮೌಲ್ಯದ ಡ್ರಗ್ಸ್ ಪತ್ತೆ ಮಾಡಲಾಗಿದೆ. ಈ ಹಿಂದೆ ನಗರದಲ್ಲಿ ಡ್ರಗ್ಸ್ ಕಾರ್ಖಾನೆ ಪತ್ತೆಯಾಗಿತ್ತು. ಹೀಗಿದ್ದರೂ ಪೊಲೀಸರು ಎಚ್ಚೆತ್ತುಕೊಂಡು ನಗರದ ವಿವಿಧೆಡೆ ಶೋಧನೆ ನಡೆಸಿ ಡ್ರಗ್ಸ್ ಪತ್ತೆ ಹಚ್ಚುವ ಕಾರ್ಯ ಮಾಡಿಲ್ಲ. ಈ ವಿಚಾರದಲ್ಲಿ ಮೈಸೂರು ಪೊಲೀಸರು ಮತ್ತೊಮ್ಮೆ ವಿಫಲ ಆಗಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಹೆಬ್ಬಾಳದಲ್ಲಿ ಎನ್‌ಸಿಬಿ ದಾಳಿ ನಡೆಸಿ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಆದರೆ, ಗೃಹ ಸಚಿವರು, ಪೊಲೀಸ್ ಅಯುಕ್ತರು ಏನು ಸಿಕ್ಕಿಲ್ಲ ಅಂತ ಹೇಳಿಕೆ ನೀಡಿದ್ದಾರೆ. 10 ಕೋಟಿ ರೂ.ಮೌಲ್ಯದ ಡ್ರಗ್ಸ್ ಪತ್ತೆಯಾಗಿರುವ ಕುರಿತು ಎನ್‌ಸಿಬಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಎನ್ ಸಿಬಿ ಅವರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ಇಲ್ಲದಿದ್ದರೆ ಮೈಸೂರಿನಲ್ಲಿ ತಯಾರಾಗುತ್ತಿದ್ದ ಡ್ರಗ್ಸ್ ಬಗ್ಗೆ ಗೊತ್ತಾಗುತ್ತಿರಲಿಲ್ಲ ಎಂದು ಹೇಳಿದರು.
ಪೊಲೀಸರು ಶಾಮೀಲು?
ದೆಹಲಿ ಪೊಲೀಸರು, ಮಹಾರಾಷ್ಟ್ರ ಪೊಲೀಸರು ಮೈಸೂರಿಗೆ ಬಂದು ಡ್ರಗ್ಸ್ ವಶಕ್ಕೆ ಪಡೆಯುತ್ತಿದ್ದಾರೆ. ಅದರೆ, ಮೈಸೂರಿನ ಪೊಲೀ ಸರಿಗೆ ಯಾವುದೇ ಮಾಹಿತಿ ಇಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ನಮ್ಮ ಪೊಲೀಸರು ಏನು ಮಾಡುತ್ತಿದ್ದಾರೆ ಅನ್ನೋ ಅನುಮಾನ ಮೂಡಿದೆ. ಡ್ರಗ್ಸ್ ವಿಚಾರದಲ್ಲಿ ಮೈಸೂರಿನ ಹೆಸರು ಪದೇ ಪದೇ ಕೇಳಿ ಬರುತ್ತಿದ್ದರೂ ಪೊಲೀಸರು ಮಾಹಿತಿ ಇಲ್ಲ ಅಂದರೆ ಏನು ಅರ್ಥ ಪೊಲೀಸರು ಕೂಡ ಶಾಮೀಲಾಗಿದ್ದಾರಾ ಅನ್ನೋ ಅನುಮಾನ ಮೂಡಿದೆ ಎಂದರು.
ವಿಶೇಷ ತಂಡ ರಚಿಸಬೇಕು
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಾಗಿತ್ತು. ಇದಕೋಸ್ಕರ ಒಂದು ವಿಶೇಷ ತಂಡ ರಚನೆ ಮಾಡಬೇಕಾಗಿತ್ತು. ಆದರೆ, ಸರ್ಕಾರ ಈ ಬಗ್ಗೆ ಆಸಕ್ತಿ ತೋರಲಿಲ್ಲ. ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಡ್ರಗ್ಸ್ ತಯಾರಿಕೆ, ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದೆ. ಮೈಸೂರಿನಲ್ಲಿ ನಡೆಯುತ್ತಿರುವ ಡ್ರಗ್ಸ್ ತಯಾರಿಕೆಯ ಕುರಿತು ಕೇಂದ್ರ ಗೃಹ ಸಚಿವರ ಗಮನ ಸೆಳೆಯಲಾಗುವುದು ಎಂದು ಹೇಳಿದರು.





