ಮೈಸೂರು: ಮೈಸೂರು ಅರಮನೆಯಲ್ಲಿ ದಸರಾ ಆನೆಗಳಾದ ಕಂಜನ್ ಹಾಗೂ ಧನಂಜಯ ದಾಂಧಲೆ ನಡೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಫ್ ಪ್ರಭುಗೌಡ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಹಾರ ಸೇವಿಸುವಾಗ ಆನೆಗಳು ಕಿತ್ತಾಡಿಕೊಂಡಿವೆ. ಗಂಡಾನೆಗೆ ಊಟ ಕೊಡುವಾಗ ಹೆಣ್ಣಾನೆ ಇರಬೇಕು. ನಿನ್ನೆ ಊಟ ಕೊಡುವಾಗ ಹೆಣ್ಣಾನೆ ಜೊತೆ ಇರಲಿಲ್ಲ. ಹೆಣ್ಣಾನೆ ಇಲ್ಲದ ಕಾರಣ ಕಂಜನ್ ಮೇಲೆ ಧನಂಜಯ ಆನೆ ದಾಳಿ ಮಾಡಿದೆ. ಧನಂಜಯ ಕಂಜನ್ ಆನೆಯನ್ನು ಓಡಿಸಿಕೊಂಡು ಹೋಗಿದ್ದಾನೆ. ಮದ ಬಂದಿತ್ತು ಎಂಬುದು ಸುಳ್ಳು. ಆ ಎರಡು ಆನೆಗಳಿಗೆ ಯಾವುದೇ ಮದ ಬಂದಿಲ್ಲ. ಸದ್ಯ ಆನೆಗಳು ನಿಯಂತ್ರಣದಲ್ಲಿವೆ. ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.
ಇನ್ನು ನಿನ್ನೆ ದಸರಾ ಮಹೋತ್ಸವಕ್ಕೆ ಆಗಮಿಸಿರುವ ಧನಂಜಯ ಹಾಗೂ ಕಂಜನ್ ಆನೆಗಳ ನಡುವೆ ದಿಢೀರ್ ಗುದ್ದಾಟ ಶುರುವಾಗಿ ಅರಮನೆಯಿಂದ ಏಕಾಏಕಿ ಹೊರ ಬಂದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.