ಮೈಸೂರು : ಅಕ್ರಮ ದಾಸ್ತಾನು, ಗ್ರಾಹಕರಿಗೆ ವಂಚನೆ ಇನ್ನಿತರ ಅಕ್ರಮಗಳ ಬಗ್ಗೆ ಆಹಾರ ಮತ್ತು ಕಾನೂನು ಮಾಪನ ಶಾಸ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ಪರಿಶೀಲನೆ ಮಾಡಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆಯ ಮೈಸೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಆಹಾರ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಮೈಸೂರಿನಲ್ಲಿ ವಿಭಾಗ ಮಟ್ಟದ ಮೊದಲ ಸಭೆಯನ್ನು ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲ ವಿಭಾಗ ಮಟ್ಟದ ಪ್ರಗತಿ ಪರಿಶೀಲನೆ ಮಾಡಲಾಗುವುದು. ಅಧಿಕಾರಿಗಳು ನೀಡುವ ಸಲಹೆಗಳನ್ನು ಪರಿಗಣಿಸಲಾಗುವುದು ಎಂದರು.
ಕೋಟ್ಯಂತರ ಬಡವರಿಗೆ ಸೇವೆ ನೀಡುವ ಇಲಾಖೆ ಇದಾಗಿದೆ. ಹೀಗಾಗಿ ಗ್ರಾಹಕರಿಗೆ ಮೋಸ, ವಂಚನೆ ಆಗದಂತೆ ಸರಿಯಾದ ತೂಕ ನೀಡಬೇಕು ಎಂದರು.
ಹದಿನೈದು ದಿನಗಳಿಂದ ಇಲಾಖೆಯ ಅನೇಕ ವಿಚಾರಗಳನ್ನು ಅರ್ಥ ಮಾಡಿಕೊಂಡು ಸುಧಾರಣೆ ಮತ್ತು ಬದಲಾವಣೆ ತರುವ ಕೆಲಸಕ್ಕೆ ಮುಂದಾಗಿದ್ದೇನೆ. ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ ಕೆಲಸ ಮಾಡಬೇಕು. ಆಹಾರ ಇಲಾಖೆ ಅಂದರೆ ಇರುವ ಕಾರ್ಡ್ ರದ್ದು ಮಾಡುವುದು, ಹೊಸ ಕಾರ್ಡು ಕೊಡುವುದನ್ನು ಹೊರತು ಬೇರೇನೂ ಮಾಡುತ್ತಿಲ್ಲ. ಆಹಾರ ನಿರೀಕ್ಷಕರಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೆ ತಮ್ಮ ಕಾರ್ಯಶೈಲಿಯನ್ನು ಬದಲಾವಣೆ ಮಾಡಿಕೊಳ್ಳಬೇಕು. ಇಲಾಖೆಯಲ್ಲಿ ಒಳ್ಳೆಯ ತಂಡವಿದೆ. ನಿಮ್ಮ ನಿಮ್ಮ ಕಾರ್ಯ ಕ್ಷೇತ್ರದ ವ್ಯಾಪ್ತಿಯಲ್ಲಿ ನಿರ್ಧರಿಸಿದರೆ ಬ್ಲಾಕ್ ಮಾರ್ಕ್ ಆಗಲ್ಲ ಎಂದು ಹೇಳಿದರು.
ಆಹಾರ ಪದಾರ್ಥಗಳನ್ನು ಎತ್ತುವಳಿ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಏಪ್ರಿಲ್ ತಿಂಗಳಲ್ಲೇ ಹೇಳಿದ್ದರೂ ಈವರೆಗೆ ಸಾಧ್ಯವಾಗಿಲ್ಲ. ಹದಿನೈದು ದಿನಗಳಲ್ಲಿ ಈ ಬಗ್ಗೆ ವರದಿ ಕೊಡಬೇಕು ಎಂದರು.
ಕಾನೂನುಮಾಪನ ಶಾಸ್ತ್ರ ಇಲಾಖೆಯ ಉಪ ನಿಯಂತ್ರಕರಾದ ಸರಳ ನಾಯರ್ ಮಾತನಾಡಿ, ಇಲಾಖೆಯಿಂದ ಹದಿನೈದು ದಿನಗಳಿಗೊಮ್ಮೆ ದಾಳಿ ಮಾಡಿ ಪರಿಶೀಲನೆ ಮಾಡಲಾಗುತ್ತದೆ. ದೂರು ಬಂದಾಗ ಭೇಟಿ ನೀಡಿ ವಿಚಾರಿಸಲಾಗುವುದು. ಜ್ಯುವೆಲ್ಲರಿ ಶಾಪ್, ಪೆಟ್ರೋಲ್ ಬಂಕ್, ಸಕ್ಕರೆ ಕಾರ್ಖಾನೆ, ಕಬ್ಬು ತಂದಾಗ ರೈತರ ಸಮ್ಮುಖದಲ್ಲಿ ತೂಕ ಮಾಡಲಾಗುವುದು. ಪೆಟ್ರೋಲ್ ಬಂಕ್‌ಗಳಿಗೆ ದಿಢೀರ್ ಭೇಟಿ ನೀಡಿ ಅಳತೆ ಮತ್ತು ಗುಣಮಟ್ಟ ಪರಿಶೀಲನೆ ಮಾಡಲಾಗುವುದು ಎಂದರು.
ಎಲ್ಲೆಲ್ಲಿ ಜನರಿಗೆ ಹೆಚ್ಚು ಮೋಸವಾಗಲಿದೆ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಅಂತಹ ಕಡೆಗಳಲ್ಲಿ ಏನು ಮಾಡಬೇಕು. ಯಾವ ರೀತಿಯಲ್ಲಿ ನಿಯಂತ್ರಣ ಮಾಡಬಹುದು ಎಂಬುದರ ಕುರಿತು ಪ್ರಶ್ನಿಸಿದಾಗ ಅನೇಕ ಅಂಶಗಳನ್ನು ವಿವರಿಸಿದರು.




