ಬೆಂಗಳೂರು: ಚಾಮುಂಡೇಶ್ವರಿ ಕೇವಲ ಹಿಂದೂಗಳ ಆಸ್ತಿ ಅಲ್ಲ.ದಸರಾ ಧಾರ್ಮಿಕ ಆಚರಣೆ ಅಲ್ಲ ಎಂದಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇದೀಗ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ಮ ನಾಡದೇವತೆ ಚಾಮುಂಡೇಶ್ವರಿ. ಚಾಮುಂಡಿ ತಾಯಿ ನಮ್ಮ ನಾಡಿನ ಅಧಿದೇವತೆ. ಈ ತಾಯಿಯನ್ನು ಆರಾಧಿಸುವವರು, ನಂಬುವವರು, ಗೌರವಿಸುವವರು ಎಲ್ಲಾ ಜಾತಿ, ಧರ್ಮಗಳಲ್ಲೂ ಇದ್ದಾರೆ. ಆಕೆಯ ದರ್ಶನ ಎಲ್ಲರ ಹಕ್ಕು. ತಾಯಿ ಎಲ್ಲ ಭಕ್ತರ, ಎಲ್ಲಾ ಮಕ್ಕಳ ಾಸ್ತಿ. ಯಾರೊಬ್ಬರಿಗೂ ಸೀಮಿತ ಅಲ್ಲ. ತಾಯಿಯನ್ನು ಪೂಜಿಸಿದರೆ ಯಾರೂ ಬೇಡ ಅನ್ನಲು ಆಗುವುದಿಲ್ಲ. ಇದೇ ನನ್ನ ಮಾತಿನ ಸತ್ವ. ವಿವಾದ ಮಾಡೋದು ಬಿಜೆಪಿ ತತ್ವ ಎಂದು ಕಿಡಿಕಾರಿದ್ದಾರೆ.
ಚಾಮುಂಡಿಬೆಟ್ಟಕ್ಕೆ ಎಲ್ಲಾ ಧರ್ಮ, ಸಮಾಜದವರಿಗೂ ಪ್ರವೇಶವಿದೆ. ಎಲ್ಲರೂ ಬೆಟ್ಟಕ್ಕೆ ಹೋಗುತ್ತಾರೆ. ದೇವಿಯ ಪ್ರಾರ್ಥನೆ ಮಾಡುತ್ತಾರೆ. ಎಲ್ಲರ ನೋವನ್ನು ದೂರು ಮಾಡುವವಳು ನಮ್ಮ ದುರ್ಗಾದೇವಿ. ನಾಡಹಬ್ಬ ದಸರಾವನ್ನು ಕಣ್ತುಂಬಿಕೊಳ್ಳಲು ದೇಶ, ವಿದೇಶಗಳಿಂದ ಜನ ಬರುತ್ತಾರೆ. ಇದಕ್ಕೆ ನಮ್ಮ ರಾಜವಂಶಸ್ಥರೇ ಅನುಮತಿ ನೀಡಿ ಸಾಕ್ಷಿಯಾಗಿದ್ದಾರೆ. ನಾಡಹಬ್ಬ ಮೈಸೂರು ದಸರಾ ಎಲ್ಲಾ ಧರ್ಮದವರಿಗೂ ಸೇರಿದ್ದು. ಧರ್ಮದಲ್ಲಿ ರಾಜಕಾರಣ ಮಾಡುವುದು ಬೇಡ. ಅದನ್ನು ಆ ತಾಯಿಯೂ ಮೆಚ್ಚುವುದಿಲ್ಲ ಎಂದು ಬರೆದುಕೊಂಡಿದ್ದಾರೆ.





