ಮೈಸೂರು: ಪ್ರಧಾನಿ ನರೇಂದ್ರ ಮೋದಿ ಒಬ್ಬ ಪ್ರಜಾಪ್ರಭುತ್ವದ ಕೊಲೆಗಡುಕ, ಕೇಂದ್ರ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಹತ್ತು ತಲೆಯ ರಾವಣ ಎಂದು ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ ಎಸ್ ಶಿವರಾಂ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಆದಾಗಿನಿಂದ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಲು ಮುಡಾ ಪ್ರಕರಣವನ್ನು ಬಳಕೆ ಮಾಡಿಕೊಂಡಿದ್ದಾರೆ. ಕೇಂದ್ರ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಅವರು ಕೇಂದ್ರ ಸರ್ಕಾರದೊಂದಿಗೆ ಡೀಲ್ ಮಾಡಿಕೊಂಡು ಸಿದ್ದು ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ. ಆದರೆ ಈ ಹಿಂದೆ ನೀವು ಹಿಂಬಾಗಿಲಿನಿಂದ ಮುಖ್ಯಮಂತ್ರಿ ಆದವರು ಎಂಬುದನ್ನು ಮರೆಯಬೇಡಿ. ಸಿದ್ದರಾಮಯ್ಯ ಅವರು ಎರಡು ಬಾರಿಯೂ ಜನಬೆಂಬಲದೊಂದಿಗೆ ಮುಖ್ಯಮಂತ್ರಿ ಆಗಿದ್ದಾರೆ. ಕುಮಾರಸ್ವಾಮಿ ಅಧಿಕಾರ ದಾಹಿ, ಹತ್ತು ತಲೆಯ ರಾವಣ, ರಾಕ್ಷಸ ಪ್ರವೃತ್ತಿ ಹೊಂದಿರುವವರು. 13 ಸ್ಥಾನಗಳನ್ನು ಪಡೆದುಕೊಂಡು ಮುಖ್ಯಮಂತ್ರಿ ಆಗ್ತೀನಿ ಅಂತೀರಲ್ಲ ನಾಚಿಕೆ ಆಗಲ್ವಾ ನಿಮಗೆ ಎಂದು ಕಿಡಿಕಾರಿದರು.