ಮೈಸೂರು: ಮೈಸೂರಿನಿಂದ ಗೋಕರ್ಣಕ್ಕೆ ಪ್ರವಾಸ ಹೋಗಿದ್ದ ಶಾಲಾ ಬಸ್ ಪಲ್ಟಿಯಾಗಿ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 26ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ತರಳಬಾಳು ವಿದ್ಯಾಸಂಸ್ಥೆಯ ಬಳಿ ಆಗಮಿಸಿರುವ ಪೋಷಕರು, ತಮ್ಮ ಮಕ್ಕಳನ್ನು ನೋಡುವ ತವಕದಲ್ಲಿದ್ದಾರೆ. ಶಾಲೆಯ ಮುಂಭಾಗ ಕಣ್ಣೀರು ಹಾಕುತ್ತಿರುವ ಪೋಷಕರು, ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಲಕ ಕುಡಿದು ಬಸ್ ಚಲಾಯಿಸುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಚಾಲಕನ ಅಜಾಗರೂಕತೆಯಿಂದಲೇ ಘಟನೆ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನು ಓದಿ: ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿ ಪ್ರಕರಣ: ಮಕ್ಕಳಿಗಾಗಿ ಮೈಸೂರಿನಲ್ಲಿ ಕಾಯುತ್ತಿರುವ ಪೋಷಕರು
ಇನ್ನು ಶಾಲಾ ಪ್ರವಾಸಕ್ಕೆ ಖಾಸಗಿ ಬಸ್ ವ್ಯವಸ್ಥೆ ಮಾಡಿದ್ದ ಶಾಲಾ ಆಡಳಿತ ಮಂಡಳಿ ವಿರುದ್ಧವೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರವಾರ ಜಿಲ್ಲಾಡಳಿತವು ಉಳಿದ ಮಕ್ಕಳಿಗೆ ಮೈಸೂರಿಗೆ ತಲುಪಲು ಬಸ್ ವ್ಯವಸ್ಥೆ ಮಾಡಿದ್ದು, ಇಂದು 12 ಗಂಟೆ ವೇಳೆಗೆ ಅಲ್ಲಿಂದ ಮಕ್ಕಳು ಹೊರಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಮೃತ ವಿದ್ಯಾರ್ಥಿಯ ಮೃತದೇಹ ಇಂದು ಸಂಜೆ ಮೈಸೂರಿಗೆ ಆಗಮಿಸುವ ಸಾಧ್ಯತೆಯಿದೆ.
ಘಟನೆ ವಿವರ: ಮೈಸೂರಿನಿಂದ ಗೋಕರ್ಣಕ್ಕೆ ಪ್ರವಾಸ ಹೋಗಿದ್ದ ಶಾಲಾ ಬಸ್ ಪಲ್ಟಿಯಾಗಿ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 26ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸುಳೆ ಮುರ್ಕಿ ಕ್ರಾಸ್ ಬಳಿ ಭಾನುವಾರ ಸಂಜೆ ನಡೆದಿದೆ.





