ಮೈಸೂರು: ಮೈಸೂರು ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದ್ದು, ಎಲ್ಲೆಡೆ ಆತಂಕ ಮೂಡಿಸಿದೆ. ಬಾಂಬ್ ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲಯದ ಎಲ್ಲಾ ಕಲಾಪಗಳನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು.
ನ್ಯಾಯಾಲಯಗಳ ಸಂಕೀರ್ಣದಲ್ಲಿದ್ದ ವಕೀಲರು, ಕಕ್ಷಿದಾರರು ಹಾಗೂ ಸಿಬ್ಬಂದಿಯನ್ನು ಪೊಲೀಸರು ಹೊರಗಡೆಗೆ ಸುರಕ್ಷಿತವಾಗಿ ಕಳುಹಿಸಿದರು. ಕಲಾಪಗಳ ಮಧ್ಯೆಯೇ ನ್ಯಾಯಾಲಯದ ಆವರಣ ಖಾಲಿ ಮಾಡಲಾಗಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಘಟನಾ ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ತಂಡ ಭೇಟಿ ನೀಡಿ ಸುದೀರ್ಘ ಪರಿಶೀಲನೆ ನಡೆಸಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ.
ಈ ಘಟನೆ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ನ್ಯಾಯಾಲಯಗಳ ಸಂಕೀರ್ಣದಲ್ಲಿ ಸಂಭವಿಸಿದ್ದು, ಬೆದರಿಕೆ ಕರೆ ಮಾಡಿದ ವ್ಯಕ್ತಿಯ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





