Mysore
25
clear sky

Social Media

ಶುಕ್ರವಾರ, 23 ಜನವರಿ 2026
Light
Dark

ಒಳಮೀಸಲಾತಿ ಜಾರಿಗೆ ಪ್ರಯತ್ನ ಆರಂಭಿಸಿದ್ದೇ ಬಿಜೆಪಿ ಸರ್ಕಾರ: ಎನ್.ಮಹೇಶ್‌

n mhesh

ಮೈಸೂರು: ಒಳಮೀಸಲಾತಿ ವಿಚಾರದಲ್ಲಿ ಅಟ್ಟಿಕ್ಕಿದವಳಿಗಿಂತ ಬೊಟ್ಟು ಇಕ್ಕಿದವಳು ಮೇಲು‌ ಎಂಬಂತಾಗಿದೆ ಎಂದು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿಗೆ ಪ್ರಯತ್ನಗಳನ್ನು ಆರಂಭಿಸಿದ್ದೇ ಬಿಜೆಪಿ ಸರ್ಕಾರ. ರಾಜ್ಯದಲ್ಲಿ ಬಿಜೆಪಿ ಮೊದಲ ಬಾರಿ ಅಧಿಕಾರಕ್ಕೆ ಬಂದಾಗಲೇ ಒಳ‌ಮೀಸಲಾತಿ ಜಾರಿಗಾಗಿ ಅಧ್ಯಯನ ಮಾಡಲು ಸಮಿತಿಯನ್ನು ರಚಿಸಲಾಗಿತ್ತು. ಆದರೆ ಜಾರಿಯಾಗುವಷ್ಟರಲ್ಲಿ‌ ಚುನಾವಣೆ ಸಮೀಪಿಸಿತ್ತು. ಆ ಬಳಿಕ ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿ ಆಗಿದ್ದರೂ ಒಳ ಮೀಸಲಾತಿ ಜಾರಿಗೆ ಮುಂದಾಗಲಿಲ್ಲ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಒಳ‌ಮೀಸಲಾತಿ ಜಾರಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಆದರೂ ಅನುಷ್ಠಾನಕ್ಕೆ ತರಲು ಸಾಧ್ಯವಾಗಲಿಲ್ಲ.

ಬಿಜೆಪಿಯ ಹೋರಾಟದ ಫಲವಾಗಿ ಇದೀಗ ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಬಿಜೆಪಿ ನಡೆಸಿದ ಹೋರಾಟದ ಫಲವನ್ನು ಕಾಂಗ್ರೆಸ್ ಪಡೆದುಕೊಳ್ಳುತ್ತಿದೆ. ಇದನ್ನು ಕಾಂಗ್ರೆಸ್ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಇದರ ಹೊರತಾಗಿಯೂ ಅಧಿಕೃತ ಆದೇಶ ಹೊರಬಿದ್ದ ನಂತರ ಏನಾಗಲಿದೆ ಎಂದು ಕಾದು ನೋಡಬೇಕಿದೆ. ಏಕೆಂದರೆ ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳಿಗೆ ಅನ್ಯಾಯ ಆಗಿದೆ ಎಂಬ ಬಲವಾದ ಕೂಗು ಕೇಳಿಬಂದಿದೆ. ಪರಿಣಾಮ ಆ ಸಮುದಾಯಗಳು ಈಗಾಗಲೇ ಹೋರಾಟ ಆರಂಭಿಸಿವೆ. ಹಾಗಾಗಿ ಅಧಿಕೃತ ಆದೇಶ ಹೊರಬಿದ್ದ ನಂತರ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.

ಇನ್ನು ಒಳಮೀಸಲಾತಿ ಜಾರಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಫುಲ್ ಸ್ಟಾಪ್ ಇಡುವ ಬದಲು ಕಾಮಾ ಇಟ್ಟಿದ್ದಾರೆ. ಒಳ ಮೀಸಲಾತಿ ಜಾರಿಗಾಗಿ ಕಳೆದ 30 ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಇದಕ್ಕೆ ಸಿಎಂ ಸಿದ್ದರಾಮಯ್ಯ ಫುಲ್ ಸ್ಟಾಪ್‌ ಇಡುತ್ತಾರೆ ಎಂದು ನಂಬಿದ್ದೆವು. ಆದರೆ ಸಿದ್ದರಾಮಯ್ಯನವರು ಒಳ ಮೀಸಲಾತಿ ಹಂಚಿಕೆ ಮಾಡುವಾಗ ಫುಲ್ ಸ್ಟಾಪ್ ಇಡುವ ಬದಲು ಕಾಮಾ ಹಾಕಿ ಬಿಟ್ಟಿದ್ದಾರೆ ಎಂದು ವಿಶ್ಲೇಷಿಸಿದರು.

ಇನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಸುತ್ತಿರುವುದನ್ನು‌ ಖಂಡಿಸಿ ನಾಳೆ ರಾಜ್ಯದಾದ್ಯಂತ ಧರ್ಮಸ್ಥಳ ಚಲೋ ಆಂದೋಲನಕ್ಕೆ ಕರೆ ನೀಡಲಾಗಿದೆ
ಪವಿತ್ರ ಕ್ಷೇತ್ರವಾಗಿರುವ ಧರ್ಮಸ್ಥಳದ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಧರ್ಮಸ್ಥಳ‌ ಚಲೋ ಆಂದೋಲನಕ್ಕೆ ಕರೆ ಕೊಡಲಾಗಿದೆ. ಮೈಸೂರು ಸೇರಿದಂತೆ ರಾಜ್ಯದಾದ್ಯಂತ ಧರ್ಮಸ್ಥಳ ಚಲೋ ಆಂದೋಲನ ನಡೆಯಲಿದೆ. ರಾಜ್ಯದ ಎಲ್ಲಾ 224 ವಿಧಾನಸಭೆ ಕ್ಷೇತ್ರಗಳಲ್ಲೂ ಧರ್ಮಸ್ಥಳ ಚಲೋ ಆಂದೋಲನ ನಡೆಯಲಿದೆ ಎಂದು ಮಾಹಿತಿ ನೀಡಿದರು.

Tags:
error: Content is protected !!